ಬೆಂಗಳೂರು: ಈ ಬಾರಿ SSLC ಎಕ್ಸಾಂನಲ್ಲಿ ಪಾಸಿಂಗ್ ಗ್ರೇಸ್ ಅಂಕ ಇರೋದಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಎಸ್‌ಎಸ್‌ಎಲ್‌ಸಿ ಪರೀಕ್ಷೆ ಶೀಘ್ರವೇ ಬರಲಿದೆ. ಕಳೆದ ವರ್ಷ ವೆಬ್‌ಕಾಸ್ಟ್ ಮಾಡುವುದರಿಂದ ಕಡಿಮೆ ಫಲಿತಾಂಶ ಬಂದಿತ್ತು.
ಈ ಹಿನ್ನೆಲೆಯಲ್ಲಿ ಫಲಿತಾಂಶ ವೃದ್ಧಿಗೆ ಏನು ಮಾಡಬೇಕು ಅಂತ ಚರ್ಚೆ ಮಾಡಿದ್ವಿ. ಈ ನಿಟ್ಟಿನಲ್ಲಿ ಇಲಾಖೆ ಕೆಲಸ ಮಾಡಿದೆ. ಪ್ರತಿ ಜಿಲ್ಲೆಯ ಸಿಇಒಗಳು ಈ ಬಾರಿ ನಮಗೆ ಹೆಚ್ಚು ಸಹಕಾರ ಕೊಟ್ಟಿದ್ದಾರೆ. ಮಕ್ಕಳಿಗೆ ಪರೀಕ್ಷಾ ಸಿದ್ಧತೆಗೆ ನಾವು ಮಾರ್ಗೋಪಾಯಗಳನ್ನ ಸಿದ್ಧ ಮಾಡಿದ್ದೇವೆ ಎಂದು ಹೇಳಿದ್ದಾರೆ.
3 ಎಕ್ಸಾಂ ಪದ್ಧತಿ ಈಗ ಮಕ್ಕಳಿಗೆ ಅರ್ಥವಾಗಿದೆ. ಒಂದು ವೇಳೆ ಫೇಲ್ ಆದರೆ ಮತ್ತೆ ಶಾಲೆಗೆ ಸೇರುವ ವ್ಯವಸ್ಥೆಯೂ ಕೂಡಾ ಈಗ ಮಕ್ಕಳಿಗೆ ಅರ್ಥವಾಗಿದೆ. ವಿದ್ಯಾರ್ಥಿಗಳಿಗೆ ಇರುವ ಸಮಸ್ಯೆ ಬಗ್ಗೆ ಇವತ್ತು ರಿವ್ಯೂ ಮೀಟಿಂಗ್ ಮಾಡಿದ್ದೇವೆ. ಎಲ್ಲಾ ಜಿಲ್ಲೆಯ ಡಿಸಿ, ಸಿಇಓಗಳ ಜೊತೆ ಚರ್ಚೆ ಮಾಡಿದ್ದೇವೆ. ಈ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಜಾಸ್ತಿ ಆಗಲಿದೆ.
ಮಕ್ಕಳಿಗೆ ಒತ್ತಡ ಹಾಕಬಾರದು ಅಂತ ಸೂಚನೆ ನೀಡಿದ್ದೇನೆ. ಸಿಎಂ ಅವರು ಸಭೆಯಲ್ಲಿ ಗರಂ ಆಗಿದ್ರು. ಗ್ರೇಸ್ ಅಂಕ ಕೊಡಬಾರದಿತ್ತು ಅಂತ ಹೇಳಿದ್ರು. ಈ ಬಾರಿ ಯಾವುದೇ ಕಾರಣಕ್ಕೂ ಗ್ರೇಸ್ ಅಂಕ ಕೊಡೋದಿಲ್ಲ. ಕೋವಿಡ್ ಹಿನ್ನೆಲೆಯಲ್ಲಿ ಕೊಟ್ಟಿದ್ದ 10% ಗ್ರೇಸ್ ಅಂಕದ ಬಗ್ಗೆ ಪರಿಶೀಲನೆ ಮಾಡ್ತೀವಿ. ಆದರೆ ನಾವು ಕಳೆದ ಬಾರಿ ವೆಬ್‌ಕಾಸ್ಟಿಂಗ್ ಹಿನ್ನೆಲೆಯಲ್ಲಿ ಕೊಟ್ಟಿದ್ದ 10% ಗ್ರೇಸ್ ಅಂಕ ಈ ಬಾರಿ ಕೊಡೊಲ್ಲ ಎಂದು ತಿಳಿಸಿದ್ದಾರೆ.