ವಕ್ಫ್ ಆಸ್ತಿ ವಿಚಾರದಲ್ಲಿ ರಾಜಕೀಯ ಸಲ್ಲದು: ಸಚಿವ ಬಿ.ಝಡ್. ಜಮೀರ್ ಅಹಮದ್ ಖಾನ್

0
Spread the love

ವಿಜಯಸಾಕ್ಷಿ ಸುದ್ದಿ, ಬೆಳಗಾವಿ-ಸುವರ್ಣಸೌಧ: ದೇವಸ್ಥಾನ ಹಾಗೂ ರೈತರ ಜಮೀನುಗಳನ್ನು ವಕ್ಫ್ಗೆ ಸೇರ್ಪಡೆ ಮಾಡುವುದಿಲ್ಲ. ಒಂದು ವೇಳೆ ವಕ್ಫ್ ಆಸ್ತಿ ಸಂಬಂಧವಾಗಿ ನೋಟಿಸ್ ನೀಡಿದ್ದರೆ, ಆ ನೋಟಿಸ್‌ಗಳನ್ನು ಹಿಂಪಡೆಯುವುದಾಗಿ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ.ಝಡ್. ಜಮೀರ್ ಅಹಮದ್ ಖಾನ್ ಸ್ಪಷ್ಟಪಡಿಸಿದರು.

Advertisement

ಬೆಳಗಾವಿ ಸುವರ್ಣಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕರು ನಿಯಮ 69 ಅಡಿ, ರೈತರ ಜಮೀನು, ಮಠ-ಮಂದಿರ ಜಾಗ, ಸಾರ್ವಜನಿಕರ ಆಸ್ತಿ, ಸರ್ಕಾರಿ ಕಟ್ಟಡಗಳ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದು ಮಾಡಿರುವ ಕುರಿತು ಪ್ರಸ್ತಾಪಿಸಿದ್ದ ವಿಚಾರಗಳಿಗೆ ಬುಧವಾರ ವಿಧಾನಸಭೆಯ ಕಲಾಪದಲ್ಲಿ ಸಚಿವ ಜಮೀರ್ ಅಹಮದ್ ಖಾನ್ ಉತ್ತರಿಸಿದರು.

ಒಂದು ವೇಳೆ ವಕ್ಫ್ ಜಾಗದಲ್ಲಿಯೇ ದೇವಸ್ಥಾನ ನಿರ್ಮಿಸಿದ್ದರೂ ಕೂಡ, ಸರ್ಕಾರ ಅದನ್ನು ಮುಟ್ಟುವುದಿಲ್ಲ. ಬದಲಿಗೆ ದೇವಸ್ಥಾನಕ್ಕೆ ಮರಳಿ ಆ ಜಾಗವನ್ನು ನೀಡಲಾಗುವುದು. ರೈತರು ಉಳುಮೆ ಮಾಡುತ್ತಿರುವ ಜಮೀನುಗಳನ್ನು ಸಹ ವಕ್ಫ್ ಸೇರ್ಪಡೆ ಮಾಡುವುದಿಲ್ಲ. ವಕ್ಫ್ ತಿದ್ದುಪಡಿ ಕಾಯ್ದೆ ಹಾಗೂ ಸರ್ವೋಚ್ಛ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಕಳೆದ ಜೂನ್ ತಿಂಗಳ 25ರಂದು ವಿಜಯಪುರ ಜಿಲ್ಲೆಯಲ್ಲ್ಲಿ ವಕ್ಫ್ ಅದಾಲತ್ ಹಮ್ಮಿಕೊಳ್ಳಲಾಗಿತ್ತು. ಇದರ ಆಧಾರದ ಮೇಲೆ ಕಂದಾಯ ಅಧಿಕಾರಿಗಳು ವಕ್ಫ್ ಆಸ್ತಿ ಅತಿಕ್ರಮಣಕ್ಕೆ ನೋಟಿಸ್ ನೀಡಿದ್ದಾರೆ. ಇದನ್ನು ತಪ್ಪಾಗಿ ಅರ್ಥೈಸಿ ರಾಜ್ಯಾದ್ಯಂತ ಗೊಂದಲ ಮೂಡಿಸಲಾಗಿದೆ ಎಂದು ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.

ಸಮುದಾಯದ ಸೇವೆಗಾಗಿ ಮುಸ್ಲಿಂ ದಾನಿಗಳು ನೀಡಿದ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಪರಿಗಣಿಸಲಾಗುತ್ತದೆ. ರಾಜ್ಯದಲ್ಲಿ ಒಟ್ಟಾರೆ 1.28 ಲಕ್ಷ ಎಕರೆ ವಕ್ಫ್ ಆಸ್ತಿ ಇರುವುದಾಗಿ ದಾಖಲೆಗಳಲ್ಲಿದೆ. ಈ ಜಮೀನಿನಲ್ಲಿ ೪೭,೨೬೩ ಎಕರೆ ಇನಾಂ ರದ್ದತಿ ಹಾಗೂ ೨೩,೬೨೩ ಎಕರೆ ಭೂ ಸುಧಾರಣೆ ಕಾಯ್ದೆ ಅನುಸಾರ ಉಳುವವರಿಗೆ ಮಂಜೂರು ಮಾಡಲಾಗಿದೆ. ಸುಮಾರು ೩೦೦೦ ಎಕರೆ ವಕ್ಫ್ ಜಮೀನನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಸರ್ಕಾರಕವೇ ವಶಪಡಿಸಿಕೊಂಡಿದೆ. ಸುಮಾರು ೧೭,೯೬೯ ಎಕರೆ ವಕ್ಫ್ ಜಮೀನನ್ನು ಖಾಸಗಿ ವ್ಯಕ್ತಿಗಳು ಅತಿಕ್ರಮಣ ಮಾಡಿದ್ದಾರೆ. ಇದರಲ್ಲಿ ಶೇ.೯೫ರಷ್ಟು ಜನರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಉಳಿದ ಶೇ.೫ರಷ್ಟು ಜಮೀನನ್ನು ಅನ್ಯ ಕೋಮಿನವರ ಸುಪರ್ದಿಯಲ್ಲಿದೆ ಎಂದರು.

ಈ ವಿಚಾರದಲ್ಲಿ ವಿನಾಕಾರಣ ರಾಜಕೀಯ ಸಲ್ಲದು. ಕಾಯ್ದೆ ಅನುಸಾರ ರಾಜ್ಯದಲ್ಲಿ ಅಧಿಕಾರ ನಡೆಸಿದ ಎಲ್ಲಾ ಸರ್ಕಾರಗಳು ನೋಟಿಸ್ ನೀಡುವ ಕೆಲಸ ಮಾಡಿವೆ. ಮೈಸೂರು ಮುನೇಶ್ವರ ನಗರದಲ್ಲಿ ವಕ್ಫ್ ಜಾಗದಲ್ಲಿ ವಾಸವಾಗಿರುವ ಕುಟುಂಬಗಳನ್ನು ಒಕ್ಕಲು ಎಬ್ಬಿಸುವುದಿಲ್ಲ. ದಿವಾನ್ ವಿಶ್ವೇಶ್ವರಯ್ಯನವರು ಓದಿದ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ಶಾಲೆಯ ವಿವಾದನ್ನು ಸರ್ಕಾರ ಪರಿಹರಿಸಿದೆ. ಶಾಲೆಗೆ ಜಮೀನು ಮಂಜೂರು ಮಾಡಿ ಪಹಣಿಯನ್ನು ನೀಡಲಾಗಿದೆ ಎಂದು ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.


Spread the love

LEAVE A REPLY

Please enter your comment!
Please enter your name here