ಬೆಂಗಳೂರು: ಮುಡಾ ನಿವೇಶನ ಹಂಚಿಕೆಯಲ್ಲಿ ಹಗರಣ ಆರೋಪ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರ ಕುರಿತು ತನಿಖೆಗೆ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅನುಮತಿ ನೀಡಿದ್ದಾರೆ. ಆರ್ಟಿಐ ಕಾರ್ಯಕರ್ತರಾದ ಟಿ. ಜೆ. ಅಬ್ರಹಾಂ, ಮೈಸೂರಿನ ಸ್ನೇಹಮಯಿ ಕೃಷ್ಣ ದೂರಿನ ಮೇರೆಗೆ ರಾಜ್ಯಪಾಲರು ಆರು ಪುಟಗಳ ಆದೇಶ ಹೊರಡಿಸಿದ್ದಾರೆ.
ರಾಜ್ಯಪಾಲರ ಪ್ರಾಸಿಕ್ಯೂಷನ್ ನೀಡಿರುವ ವಿಚಾರದ ಬಗ್ಗೆ ಅರಮನೆ ಮೈದಾನದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಚುನಾಯಿತ ಸರ್ಕಾರವನ್ನು ಕಿತ್ತು ಹಾಕಲು ಅನೇಕ ರಾಜ್ಯಗಳಲ್ಲಿ ಷಡ್ಯಂತರ ರೂಪಿಸಲಾಗಿದೆ. ಬಿಜೆಪಿ, ಜೆಡಿಎಸ್, ಬೇರೆಯವರಲ್ಲ ಸೇರಿಕೊಂಡು ನಮ್ಮ ಸರ್ಕಾರವನ್ನು ಕೆಳಗಿಳಿಸಲು ಪ್ರಯತ್ನಪಡುತ್ತಿದ್ದಾರೆ ಎಂದರು.
ನಾವು ಅದರ ವಿರುದ್ಧ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡುತ್ತೇವೆ. ಕುಮಾರಸ್ವಾಮಿ ಅವರು ಇದ್ದ ಲೋಕಾಯುಕ್ತ ವರದಿ ಇದೆ. ಹೈಕಮಾಂಡ್, ಸಂಪೂರ್ಣ ಕ್ಯಾಬಿನೆಟ್, ಸರ್ಕಾರ, ಎಲ್ಲ ಶಾಸಕರು ನನ್ನ ಬೆಂಬಲಕ್ಕೆ ನಿಂತಿದ್ದಾರೆ. ರಾಜ್ಯಭವವನ್ನು ರಾಜಕೀಯ ದಾಳವಾಗಿ ಉಪಯೋಗಿಸಲಾಗುತ್ತಿದೆ. ರಾಜ್ಯಪಾಲರು ಅವರು ಕೇಂದ್ರ ಸರ್ಕಾರದ ಕೈಗೊಂಬೆ ರೀತಿ ವರ್ತಿಸುತ್ತಿದ್ದಾರೆ ಎಂದು ಕೇಂದ್ರ ಮತ್ತು ರಾಜ್ಯ ಬಿಜೆಪಿ ನಾಯಕರ ವಿರುದ್ಧ ಸಿಎಂ ವಾಗ್ದಾಳಿ ನಡೆಸಿದರು.