ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಹದಗೆಟ್ಟ ರೈತ ಸಂಪರ್ಕ ರಸ್ತೆಗಳಿಗೆ ಒಂದಷ್ಟು ಮಣ್ಣು ಹಾಕಲೂ ಅನುದಾನವಿಲ್ಲದ ಅಸಹಾಯಕತೆಯ ನಡುವೆಯೂ ರೈತರ, ಸಾರ್ವಜನಿಕರ ಸಹಕಾರದೊಂದಿಗೆ ರಸ್ತೆಗೆ ಮಣ್ಣು ಹಾಕಿ ತಾತ್ಕಾಲಿಕ ಪರಿಹಾರಕ್ಕೆ ಶಾಸಕ ಡಾ. ಚಂದ್ರು ಲಮಾಣಿ ಮುಂದಾಗುತ್ತಿದ್ದಾರೆ. ಆದರೆ ಇದಕ್ಕೂ ಕಾನೂನು ತೊಡಕು ಎದುರಾಗಿದ್ದು, ಮಣ್ಣು ಹಾಕಲು ಗ್ರಾಮಸ್ಥರ ವಿರೋಧದಿಂದ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.
ಲಕ್ಷ್ಮೇಶ್ವರ ವ್ಯಾಪ್ತಿಯ ಜಂಗಳಕೇರಿ ರೈತ ಸಂಪರ್ಕ ರಸ್ತೆ ಸಾಕಷ್ಟು ಹದಗೆಟ್ಟಿದೆ. ಈ ಭಾಗದ ನೂರಾರು ರೈತರು ಸಂಕಷ್ಟದಲ್ಲಿದ್ದು, ರಸ್ತೆ ದುರಸ್ಥಿ ಮಾಡಿಸಿಕೊಡುವಂತೆ ಮನವಿ ಮಾಡಿದ್ದರು. ಮನವಿಯನ್ವಯ ಶಾಸಕರು ನಾನು ಜೆಸಿಬಿ ಖರ್ಚು ಕೊಡುತ್ತೇನೆ, ಒಡೆಯರ ಮಲ್ಲಾಪುರದ ಕೂಸಿನ ಗುಡ್ಡದಿಂದ ನೀವೇ ಟ್ರ್ಯಾಕ್ಟರ್ ಮೂಲಕ ಮಣ್ಣನ್ನು ರಸ್ತೆಗೆ ಹಾಕುವ ಕೆಲಸ ಮಾಡಿಕೊಳ್ಳಿ ಎಂದು ರೈತರಿಗೆ ಹೇಳಿದ್ದಾರೆ.
ಅದರಂತೆ ರೈತರು ಶಾಸಕರು ಕೊಟ್ಟ ಜೆಸಿಬಿ ಬಳಸಿ, ಪ್ರತಿಯೊಬ್ಬರೂ 500 ರೂನಂತೆ ಹಣ ಕೂಡಿಸಿ ಟ್ರ್ಯಾಕ್ಟರ್ ಗಳ ಮೂಲಕ ಮಲ್ಲಾಪುರ ವ್ಯಾಪ್ತಿಯ ಕೂಸಿನ ಗುಡ್ಡದಲ್ಲಿನ ಮಣ್ಣು ಹೇರಲು ಮುಂದಾದಾಗ ಒಡೆಯರ ಮಲ್ಲಾಪುರದ ರೈತರು ಮಣ್ಣು ಹೇರುವುದಕ್ಕೆ ಅಡ್ಡಿಪಡಿಸಿದ್ದಾರೆ. ಈ ವೇಳೆ ಒಡೆಯರ ಮಲ್ಲಾಪುರ ಗ್ರಾಮದ ಮುಖಂಡರಾದ ಪರಮೇಶಪ್ಪ ಮೆಳ್ಳಿಗಟ್ಟಿ, ಅರ್.ಸಿ. ಪಾಟೀಲ, ದ್ಯಾಮಣ್ಣ ತಳವಾರ, ಲಕ್ಷ್ಮವ್ವ ಮೆಳ್ಳಿಗಟ್ಟಿ, ಪದ್ಮರಾಜ ಪಾಟೀಲ, ನಿಂಗಪ್ಪ ಪಶುಪತಿಹಾಳ ಸೇರಿ ಗ್ರಾಮಸ್ಥರು ಈ ಗುಡ್ಡದಲ್ಲಿ ಕೂಸಮ್ಮದೇವಿ ಮೂರ್ತಿ ಇದ್ದು, ಧಾರ್ಮಿಕ ಭಾವನೆ ಹೊಂದಿದ್ದೇವೆ. ಗೋಮಾಳದ ರಕ್ಷಣೆಗಾಗಿ ಇಲ್ಲಿ ಗಿಡಮರ ಬೆಳೆಸಿ ಕಾಯುತ್ತೇವೆ. ಇದು ಗೋಮಾಳದ ಜಮೀನು. ಮಣ್ಣು ಹೇರಬೇಡಿ ಎಂದು ಅಡ್ಡಿಪಡಿಸಿದ್ದಾರೆ. ಈ ವೇಳೆ ಮಣ್ಣು ಹೇರಲು ಬಂದ ರೈತರು, ನಾವೂ ರೈತರೇ ಆಗಿದ್ದು, ಹೊಲಕ್ಕೆ ಹೋಗಲು ದಾರಿ ಇಲ್ಲದಂತಾಗಿದೆ. ಮಣ್ಣು ಹೇರಲು ಬಿಡಿ ಎಂದು ಹೇಳಿದಾಗ ಪರಿಸ್ಥಿತಿ ಬದಲಾಗಿತ್ತು.
ಈ ವೇಳೆ ಸ್ಥಳಕ್ಕಾಗಮಿಸಿ ಕಂದಾಯ ನಿರೀಕ್ಷಕ ಎಂ.ಎ ನಧಾಪ್, ಗ್ರಾಮ ಆಡಳಿತಾಧಿಕಾರಿ ಬಿ.ಎಂ. ಮಲ್ಲಿಗವಾಡ ಮತ್ತು ಪೊಲೀಸರು ರೈತರನ್ನು ಸಮಾಧಾನಪಡಿಸಿ ಮಣ್ಣು ಹೇರುವುದನ್ನು ಬಂದ್ ಮಾಡಿಸಿದ್ದಾರೆ. ಕೆಲ ದಿನಗಳ ಹಿಂದೆ ಅಣ್ಣಿಗೇರಿ-ಯತ್ನಳ್ಳಿ ರೈತ ಸಂಪರ್ಕ ರಸ್ತೆಗೆ ಗೊಜನೂರ ಗುಡ್ಡದಿಂದ ಮಣ್ಣು ಹೇರಲು ಹೋದ ರೈತರನ್ನೂ ಗ್ರಾಮಸ್ಥರು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ವಾಪಸ್ ಕಳುಹಿಸಿದ್ದಾರೆ. ಈ ನಡುವೆಯೂ ರೈತರು ದೊಡ್ಡೂರ ರಸ್ತೆಯಲ್ಲಿನ ಕೆರೆಯಲ್ಲಿ ಮಣ್ಣು ಹೇರಿ ರಸ್ತೆಗೆ ಮಣ್ಣು ಹಾಕಿ ತಾತ್ಕಾಲಿಕ ಪರಿಹಾರ ಕಂಡುಕೊAಡಿದ್ದಾರೆ.
ಒಟ್ಟಿನಲ್ಲಿ ತಾಲೂಕಿನಲ್ಲಿ ಹದಗೆಟ್ಟ ಮುಖ್ಯ ರಸ್ತೆಗಳ ಜತೆಗೆ ರೈತ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಅತ್ತ ಅನುದಾನವೂ ಇಲ್ಲ, ಸ್ವಂತ ಹಣದಿಂದ ರಸ್ತೆಗೆ ತಾತ್ಕಾಲಿಕ ಪರಿಹಾರ ಮಾಡಿಕೊಳ್ಳಲು ಹಿಡಿ ಮಣ್ಣೂ ಸಿಗುತ್ತಿಲ್ಲ ಎಂಬಂತಾಗಿದೆ.
“ತಾಲೂಕಿನಲ್ಲಿ ಮುಖ್ಯ ರಸ್ತೆಗಳ ಜತೆಗೆ ರೈತ ಸಂಪರ್ಕ ರಸ್ತೆಗಳೂ ಹದಗೆಟ್ಟಿವೆ. ಹಿಂದುಳಿದ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಕಲ್ಪಿಸುವಂತೆ ಮುಖ್ಯಮಂತ್ರಿಗಳು ಸೇರಿ ಸಂಬಂಧಪಟ್ಟ ಸಚಿವರು, ಉನ್ನತಮಟ್ಟದ ಅಧಿಕಾರಿಗಳಿಗೂ ಮನವಿ ಸಲ್ಲಿಸಿದ್ದೇನೆ. ಸದನದಲ್ಲೂ ರಸ್ತೆಗಳ ಅಭಿವೃದ್ಧಿಗೆ ಪ್ರಶ್ನೆ ಮಾಡಿದ್ದೇನೆ. ಆದಾಗ್ಯೂ ಅನುದಾನವಿಲ್ಲದ್ದರಿಂದ ತಾತ್ಕಾಲಿಕ ಪರಿಹಾರ ಕಲ್ಪಿಸುವ ಉದ್ದೇಶದಿಂದ ನಾವೇ ಸ್ವಂತ ಹಣದಲ್ಲಿ ಜೆಸಿಬಿ ವ್ಯವಸ್ಥೆ ಮಾಡಲು ಮುಂದಾದರೆ ಕಾನೂನು ತೊಡಕು, ಜನರ ವಿರೋಧ ವ್ಯಕ್ತವಾಗುತ್ತಿದೆ. ಈ ಪರಿಸ್ಥಿತಿಯಲ್ಲಿ ಅಧಿಕಾರಿಗಳ, ಜನರ ಸಹಕಾರ ಅಗತ್ಯವಾಗಿದೆ.
– ಡಾ. ಚಂದ್ರು ಲಮಾಣಿ.
ಶಾಸಕರು.
“ಗೋಮಾಳ, ಗುಡ್ಡ, ಅರಣ್ಯ ಪ್ರದೇಶದಲ್ಲಿ ಮಣ್ಣು ಎತ್ತುವಳಿ ಮಾಡುವುದು ಕಾನೂನು ಪ್ರಕಾರ ಅಪರಾಧವಾಗಿದೆ. ಸರ್ಕಾರಿ ಜಮೀನಿನಲ್ಲಿ ಅನಧೀಕೃತವಾಗಿ ಮಣ್ಣು ಎತ್ತುವಳಿ ಮಾಡುವುದನ್ನು ತಡೆಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಅಭಿವೃದ್ಧಿ ಕಾರ್ಯಗಳಿಗೆ ಮಣ್ಣಿನ ಕೊರತೆಯ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ”
– ವಾಸುದೇವ ಸ್ವಾಮಿ.
ತಹಸೀಲ್ದಾರರು, ಲಕ್ಷ್ಮೇಶ್ವರ