ಶಿವಮೊಗ್ಗ: ರಾಜ್ಯದಲ್ಲಿ ಗ್ಯಾಸ್, ಡೀಸೆಲ್ ಮತ್ತು ಪೆಟ್ರೋಲ್‌ಗಳಿಗೆ ಯಾವುದೇ ಕೊರತೆ ಇಲ್ಲ, ಎಲ್ಲೆಡೆ ಅವು ಲಭ್ಯವಿವೆ ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ತಿಳಿಸಿದ್ದಾರೆ.
ನಗರದ ಗೋಪಾಲಗೌಡ ಬಡಾವಣೆಯ ನೇತಾಜಿ ವೃತ್ತದಿಂದ ಆಲ್ಕೊಳ ವೃತ್ತದವರೆಗಿನ 100 ಅಡಿ ರಸ್ತೆಗೆ ದಿವಂಗತ ಎಸ್. ಬಂಗಾರಪ್ಪ ಅವರ ಹೆಸರಿನ ನಾಮಫಲಕವನ್ನು ಉದ್ಘಾಟಿಸಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ಗ್ಯಾಸ್ ಸಮಸ್ಯೆ ಕುರಿತು ಸದನದಲ್ಲಿ ಚರ್ಚೆ ನಡೆದಿದೆ. ಇದು ಅತ್ಯವಶ್ಯಕ ವಸ್ತುವಾಗಿರುವುದರಿಂದ ಇದರ ಪೂರೈಕೆ ಕುರಿತು ಕೇಂದ್ರ ಸರ್ಕಾರ ಗಮನ ಹರಿಸಬೇಕಾಗಿದೆ ಎಂದು ಅವರು ಹೇಳಿದರು.
ಸದ್ಯ ಯಾವುದೇ ದೊಡ್ಡ ಸಮಸ್ಯೆ ಇಲ್ಲ. ಕೆಲವೊಮ್ಮೆ ಆತಂಕದಿಂದ ಜನರು ಒಟ್ಟಾಗಿ ಖರೀದಿಗೆ ಮುಗಿಬಿದ್ದಾಗ ತಾತ್ಕಾಲಿಕ ಕೊರತೆ ಉಂಟಾಗುತ್ತದೆ ಎಂದು ಹೇಳಿದರು. ಶಿವಮೊಗ್ಗ ಜಿಲ್ಲೆಯಲ್ಲಿ ಸದ್ಯ ಗ್ಯಾಸ್, ಡೀಸೆಲ್ ಮತ್ತು ಪೆಟ್ರೋಲ್ ಪೂರೈಕೆ ಸಾಮಾನ್ಯವಾಗಿದೆ ಎಂದು ತಿಳಿಸಿದರು.
ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಸ್ಥಿತಿಯನ್ನು ಪರಿಶೀಲಿಸಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.



