ನವದೆಹಲಿ: ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧ 38ನೇ ದಿನಕ್ಕೆ ಕಾಲಿಟ್ಟಿರುವ ಹಿನ್ನೆಲೆ ಎಲ್ಪಿಜಿ ಕೊರತೆ ಬಗ್ಗೆ ಆತಂಕ ವ್ಯಕ್ತವಾಗಿದ್ದರೂ, ಕೇಂದ್ರ ಸರ್ಕಾರ ಜನರಿಗೆ ಭರವಸೆ ನೀಡಿದೆ.
ದೇಶದಲ್ಲಿ ಎಲ್ಪಿಜಿ ಕೊರತೆ ಇಲ್ಲ, ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ. ಜನರು ಆತಂಕಪಡಬೇಕಾದ ಅಗತ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಇದೇ ವೇಳೆ ಕೊರತೆ ನೀಗಿಸುವ ಉದ್ದೇಶದಿಂದ 5 ಕೆಜಿ ಗ್ಯಾಸಿನ ಸಣ್ಣ ಸಿಲಿಂಡರ್‌ಗಳ ಪೂರೈಕೆಯನ್ನು ಹೆಚ್ಚಿಸಲಾಗಿದೆ.
ಸರ್ಕಾರದ ಮಾಹಿತಿ ಪ್ರಕಾರ, 5 ಕೆಜಿ ತೂಕದ ಎಲ್ಪಿಜಿ ಸಿಲಿಂಡರ್‌ಗಳು ಎಲ್ಲಾ ಗ್ಯಾಸ್ ಏಜೆನ್ಸಿಗಳಲ್ಲೂ ಲಭ್ಯವಿದ್ದು, ಗ್ರಾಹಕರು ಯಾವುದೇ ಒಂದು ಗುರುತಿನ ಚೀಟಿ ತೋರಿಸಿ ಸುಲಭವಾಗಿ ಖರೀದಿಸಬಹುದು. ವಾಸಸ್ಥಳದ ದಾಖಲೆ ಸಲ್ಲಿಸುವ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಈ ಸಣ್ಣ ಸಿಲಿಂಡರ್‌ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಕಳೆದ ಮಾರ್ಚ್ 23ರಿಂದ ದೇಶಾದ್ಯಂತ ಸುಮಾರು 6.6 ಲಕ್ಷ ಸಿಲಿಂಡರ್‌ಗಳು ಮಾರಾಟವಾಗಿವೆ ಎಂದು ಪೆಟ್ರೋಲಿಯಂ ಸಚಿವಾಲಯ ತಿಳಿಸಿದೆ.
ಮನೆ ಬಳಕೆ, ಸಾರಿಗೆ ಹಾಗೂ ಇತರ ಅಗತ್ಯ ಸೇವೆಗಳಿಗಾಗಿ ಪೆಟ್ರೋಲ್, ಡೀಸೆಲ್ ಮತ್ತು ಅನಿಲ ಪೂರೈಕೆ ನಿರಂತರವಾಗಿರಲಿದೆ. ಏಪ್ರಿಲ್ 6ರಿಂದ ರಸಗೊಬ್ಬರ ಘಟಕಗಳಿಗೆ ಅನಿಲ ಪೂರೈಕೆ ಸರಾಸರಿ ಬಳಕೆಯ 90% ಮಟ್ಟಕ್ಕೆ ಹೆಚ್ಚಾಗುವ ನಿರೀಕ್ಷೆಯಿದೆ.
ದೇಶಾದ್ಯಂತ ಎಲ್ಲಾ ಸಂಸ್ಕರಣಾಗಾರಗಳು ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಾಕಷ್ಟು ಕಚ್ಚಾ ತೈಲ ಸಂಗ್ರಹ ಇದೆ. ಪೆಟ್ರೋಲ್ ಬಂಕ್‌ಗಳಲ್ಲೂ ಸಮರ್ಪಕ ದಾಸ್ತಾನು ಇರುವುದಾಗಿ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.



