ಬೆಂಗಳೂರು:- ಆರೋಗ್ಯ ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ, ಟೆಂಡರ್ ವಿಳಂಬ ನಿಜ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ, ಆರೋಗ್ಯ ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ. ನಮ್ಮ ಸರ್ಕಾರ ಬಂದ ಆರಂಭದಲ್ಲಿ ಕೇವಲ ಶೇ 40 ರಷ್ಟು ಔಷಧ ಮಾತ್ರ ಸಿಗುತ್ತಿತ್ತು. ಉಳಿದ ಔಷಧಗಳನ್ನು ಆಸ್ಪತ್ರೆಗಳಲ್ಲೇ ಖರೀದಿ ಮಾಡಲಾಗುತ್ತಿತ್ತು. ಈಗ ಶೇ 75 ರಷ್ಟು ವೈದ್ಯಕೀಯ ಸರಬರಾಜು ನಿಗಮದಿಂದಲೇ ಔಷಧ ಪೂರೈಕೆಯಾಗುತ್ತಿದೆ ಎಂದರು.
ತಾಂತ್ರಿಕ ಕಾರಣದಿಂದ ಟೆಂಡರ್ ವಿಳಂಬವಾಗಿದೆ ಎಂದ ಅವರು, ಈ ವರ್ಷವೂ ಇಂಡೆಂಟ್ ಪ್ರಕಾರವೇ ಔಷಧ ಖರೀದಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಸದ್ಯ, ಆರೋಗ್ಯ ಕೇಂದ್ರಗಳಲ್ಲಿ ಸಾಕಷ್ಟು ಪ್ರಮಾಣದ ಔಷಧ ಇದೆ ಎಂದರು.
ಸರ್ಕಾರಿ ಆಸ್ಪತ್ರೆಗಳಲ್ಲಿ, ಆರೋಗ್ಯ ಕೇಂದ್ರಗಳಲ್ಲಿ ಯಾವ ಔಷಧ ಇಲ್ಲವೋ ಅಂಥವನ್ನು ಸ್ಥಳೀಯವಾಗಿ ಖರೀದಿಸಲು ಸೂಚನೆ ನೀಡಲಾಗಿದೆ. ಈ ಮೂಲಕ, ಔಷಧ ಕೊರತೆಯಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ ಎಂದು ಆರೋಗ್ಯ ಸಚಿವರು ತಿಳಿಸಿದರು.