ಬೆಂಗಳೂರು: ಹಿರಿಯ ಶಾಸಕರು ಸಚಿವ ಸ್ಥಾನ ಕೇಳುವುದು ತಪ್ಪಲ್ಲ, ಅದು ಗ್ಯಾಂಬ್ಲಿಂಗ್ ಅಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಎರಡು–ಮೂರು ಬಾರಿ ಗೆದ್ದಿರುವ ಶಾಸಕರು ಸಚಿವರಾಗಲು ಸಮರ್ಥರು. ಹೀಗಾಗಿ ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪೇನಿಲ್ಲ. ಆದರೆ ಅಂತಿಮ ತೀರ್ಮಾನ ಮುಖ್ಯಮಂತ್ರಿಯವರೂ ಹಾಗೂ ಹೈಕಮಾಂಡ್‌ನದ್ದೇ,” ಎಂದು ಹೇಳಿದರು.
ಶಾಸಕರು ತಮ್ಮ ಬೇಡಿಕೆಯನ್ನು ಬಹಿರಂಗವಾಗಿ ವ್ಯಕ್ತಪಡಿಸಬಹುದು. ಅದನ್ನು ಗ್ಯಾಂಬ್ಲಿಂಗ್ ಎಂದು ಕರೆಯುವುದು ಸರಿಯಲ್ಲ. ನಾಯಕತ್ವ ಅಥವಾ ಸಂಪುಟ ಪುನರ್‌ರಚನೆ ಬಗ್ಗೆ ತೀರ್ಮಾನ ಕೈಗೊಳ್ಳುವುದು ಹೈಕಮಾಂಡ್ ಹೊಣೆ. ಎಲ್ಲ ವಿಚಾರಗಳನ್ನೂ ಹೈಕಮಾಂಡ್ ಗಮನದಲ್ಲಿಟ್ಟುಕೊಂಡಿದೆ ಎಂದು ತಿಳಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈಗ ಸಂಪುಟ ಪುನರ್‌ರಚನೆ ಬಗ್ಗೆ ಮಾತ್ರ ಚರ್ಚೆ ನಡೆಯುತ್ತಿದೆ. ಅಧ್ಯಕ್ಷ ಸ್ಥಾನ ವಿಚಾರವನ್ನು ಹೈಕಮಾಂಡ್ ನಿರ್ಧರಿಸುತ್ತದೆ. ವಿವಿಧ ನಾಯಕರಿಂದ ಮಾಹಿತಿ ಪಡೆದು ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.
ದಾವಣಗೆರೆ ರಾಜಕೀಯ ಬೆಳವಣಿಗೆಗಳ ಕುರಿತು ಮಾತನಾಡಿದ ಅವರು, ಜಬ್ಬಾರ್ ಟಿಕೆಟ್ ಕೇಳಿದ್ದರು, ಆದರೆ ಸಿಗಲಿಲ್ಲ. ಬಳಿಕ ಅವರು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕೆಲವು ಮುಸ್ಲಿಂ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಡಿ.ಕೆ. ಶಿವಕುಮಾರ್ ಹೊಸ ಘಟಕ ರಚನೆ ಮಾಡುವ ಸಾಧ್ಯತೆ ಇದೆ ಎಂದು ಹೇಳಿದರು.
ಜಮೀರ್ ಅಹ್ಮದ್ ಅವರನ್ನು ದಾವಣಗೆರೆಯಲ್ಲಿ ಪ್ರಚಾರ ಮಾಡಲು ನಾನು ಕೇಳಿದ್ದೆ. ಆದರೆ ನನಗೆ ಕೇರಳ ಉಸ್ತುವಾರಿ ಇದ್ದುದರಿಂದ ಅವರು ಮೊದಲು ನಿರಾಕರಿಸಿದ್ದರು. ಬಳಿಕ ಸಿಎಂ ಸೂಚನೆಯಂತೆ ಬಾಗಲಕೋಟೆಗೆ ಬಂದು ಪ್ರಚಾರ ನಡೆಸಿದರು,” ಎಂದು ವಿವರಿಸಿದರು.



