ವಿಜಯಸಾಕ್ಷಿ ಸುದ್ದಿ, ಗದಗ: ವಚನಗಳು ಜೀವನದ ಒಳನೋಟ ನೀಡಿ, ಮಕ್ಕಳನ್ನು ಜ್ಞಾನಪೂರ್ಣ, ಸಂವೇದನಾಶೀಲ ವ್ಯಕ್ತಿಯನ್ನಾಗಿ ಮಾಡುವ ಶಕ್ತಿಯನ್ನು ಹೊಂದಿವೆ. ವಚನಗಳು ಮಕ್ಕಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಬೇಕಾಗುವ ಎಲ್ಲಾ ಅಂಶಗಳನ್ನು ಕಲಿಸುತ್ತವೆ ಎಂದು ಪೂಜ್ಯ ಶಾಂತಲಿಂಗ ಮಹಾಸ್ವಾಮಿಗಳು ಹೇಳಿದರು.
ಲಿಂಗಾಯತ ಪ್ರಗತಿಶೀಲ ಸಂಘದ 2775ನೇ ಶಿವಾನುಭವದ ಸಮ್ಮುಖ ವಹಿಸಿ ಮಾತನಾಡಿದ ಶ್ರೀಗಳು, ತೋಂಟದಾರ್ಯ ಮಠದ ಶಿವಾನುಭವ ವೈಶಿಷ್ಟ್ಯತೆಯಿಂದ ತುಂಬಿದೆ. ಪ್ರತಿ ಸೋಮವಾರ ಜರುಗುವ ಶಿವಾನುಭವ ಸಾಹಿತ್ಯ, ಸಂಗೀತ, ಕಲೆ ಅನೇಕ ಔಚಿತ್ಯಪೂರ್ಣ ಕಾರ್ಯಕ್ರಮಗಳನ್ನು ಉಣಬಡಿಸುತ್ತಿದೆ. ಮಕ್ಕಳು ಜಗ ಬೆಳಗುವ ದೀಪಗಳು. ಇಂದು ಮಕ್ಕಳ ಬಗ್ಗೆ ಶಿವಾನುಭವ ಕಾರ್ಯಕ್ರಮ. ಮಕ್ಕಳು ಬೆಳೆಯುವಾಗಲೇ ಅವರು ಸಿರಿ ಕಾಣಬಹುದು. ಮಕ್ಕಳೆಂದರೆ ತಾಯಿಗೆ ಎಲ್ಲಿಲ್ಲದ ಪ್ರೀತಿ ಎಂದರು.
ಡಿ.ಎಸ್. ಕರ್ಕಿ ಪ್ರಶಸ್ತಿ ಪುರಸ್ಕೃತ ಯುವ ಕವಿ, ರಂಗಕರ್ಮಿ ರಣತೂರಿನ ಸಂತೋಷ ಅಂಗಡಿಯವರನ್ನು ಸನ್ಮಾನಿಸಲಾಯಿತು. ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ಮತ್ತು ಕುಮಾರ ಹಿರೇಮಠ ಇವರು ವಚನ ಸಂಗೀತ ನಡೆಸಿಕೊಟ್ಟರು. ಧರ್ಮಗ್ರಂಥ ಪಠಣವನ್ನು ಶ್ರಾವಣಿ ಡಿ.ಪಾಟೀಲ ಹಾಗೂ ವಚನ ಚಿಂತನವನ್ನು ಅದಿತಿ ಕೆ.ಇ.ಂಗಳಳ್ಳಿ ಅವರು ಪ್ರಸ್ತುತಪಡಿಸಿದರು. ದಾಸೋಹ ಸೇವೆ ವಹಿಸಿದ್ದ ಕೆ.ಎಸ್. ನಾಗರಾಜ ಸೊಂಡುರ ಅವರ ಸಹೋದರಿ ಸಾವಂತ್ರವ್ವ ಪಿಳ್ಳೆ ಉಪಸ್ಥಿತರಿದ್ದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ. ಉಮೇಶ ಪುರದ, ವಿದ್ಯಾ ಪ್ರಭು ಗಂಜಿಹಾಳ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹ ಕಾರ್ಯದರ್ಶಿ ಸೋಮಶೇಖರ ಪುರಾಣಿಕ, ನಾಗರಾಜ್ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ್ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ, ಶಿವಾನುಭವ ಸಮಿತಿಯ ಸಹ ಚೇರಮನ್ ಶಿವಾನಂದ ಹೊಂಬಳ ಸೇರಿದಂತೆ ಮಠದ ಭಕ್ತರು ಉಪಸ್ಥಿತರಿದ್ದರು. ಸೋಮಶೇಖರ ಪುರಾಣಿಕ ಸ್ವಾಗತಿಸಿದರು. ಶಿವಾನುಭವ ಸಮಿತಿಯ ಚೇರಮನ್ ಐ.ಬಿ. ಬೆನಕೊಪ್ಪ ಪರಿಚಯಿಸಿದರು. ವಿದ್ಯಾ ಪ್ರಭು ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.
ಉಪನ್ಯಾಸಕರಾಗಿ ಆಗಮಿಸಿದ ಗದಗ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ರಾಜೇಂದ್ರ ಗಡಾದ ಮಾತನಾಡಿ, ಮಕ್ಕಳು ಭವಿಷ್ಯದ ಕನಸುಗಳು, ಮಕ್ಕಳನ್ನು ಸರಿದಾರಿಗೆ ತರುವ ಸಂಸ್ಕೃತಿ ಇಂಥ ಶಿವಾನುಭವದಿಂದ ಸಾಧ್ಯ. ಸತ್ಯ, ಅಹಿಂಸೆ, ನ್ಯಾಯ, ಸಮಾನತೆ, ನಂಬಿಕೆ ಇವುಗಳನ್ನು ಶರಣರು ಹಾಕಿಕೊಟ್ಟರು. ಈಗಿನ ಮಕ್ಕಳು ವಿದ್ಯಾವಂತರು, ಆದರೆ ಅವರು ವಿದೇಶದಲ್ಲಿರುತ್ತಾರೆ. ಅವರ ತಂದೆ-ತಾಯಿ ವೃದ್ಧಾಶ್ರಮದಲ್ಲಿರುತ್ತಾರೆ. ಇಂದಿನ ಮಕ್ಕಳು ಸಾಕಷ್ಟು ವಿದ್ಯಾವಂತರು, ಆದರೆ ವಿಚಾರವಂತರಲ್ಲ. ವಚನಗಳಲ್ಲಿ ಇರುವ ಮೌಲ್ಯಗಳನ್ನು ಮಕ್ಕಳು ಮನಃಪಟಲದಲ್ಲಿ ಬಿತ್ತಬೇಕು. ಮಕ್ಕಳಿಗೆ ತಿಳಿಯುವಂತ ವಿಷಯಗಳನ್ನು ಪಠ್ಯ-ಪುಸ್ತಕಗಳಲ್ಲಿ ಹಾಕಬೇಕು. ಜಗತ್ತಿಗೆ ಉತ್ತಮ ನಾಗರಿಕರಿಗಿಂತ ಉತ್ತಮ ಮನುಷ್ಯನ ಅವಶ್ಯಕತೆ ಇದೆ ಎಂದರು.



