ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಅತೀ ಕಡಿಮೆ ಅವಧಿಯಲ್ಲಿ ದೊಡ್ಡೂರು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಉತ್ತಮ ಕಟ್ಟಡ ನಿರ್ಮಿಸಿದ್ದು ಒಂದು ಸಾಧನೆಯೇ ಸರಿ. ಇದಕ್ಕೆ ಸದಸ್ಯರಲ್ಲಿನ ಒಗ್ಗಟ್ಟೇ ಪ್ರಮುಖ ಕಾರಣ. ಊರಿನ ಅಭಿವೃದ್ಧಿ ಆಗಬೇಕಾದರೆ ಅಲ್ಲಿನ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯಲ್ಲಿ ಒಮ್ಮತ ಇರಬೇಕು. ಅದು ದೊಡ್ಡೂರು ಗ್ರಾಮ ಪಂಚಾಯಿತಿಯಲ್ಲಿದೆ. ಕಟ್ಟಡದ ನಿರ್ಮಾಣಕ್ಕೆ ಅನುದಾನ ಕೊಟ್ಟಿದ್ದೇನೆ. ಉತ್ತಮ ಕೆಲಸ ಎಲ್ಲ ನಡೆಯುತ್ತವೆಯೋ ಅಲ್ಲಿ ಗ್ರಾಮಸ್ಥರ ಸಹಾಯ, ಸಹಕಾರ ಇದ್ದೇ ಇರುತ್ತದೆ ಎಂಬುದಕ್ಕೆ ದೊಡ್ಡೂರು ಗ್ರಾ.ಪಂ ನೂತನ ಕಟ್ಟಡ ಸಾಕ್ಷಿಯಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಅಭಿಪ್ರಾಯಪಟ್ಟರು.
ತಾಲೂಕಿನ ದೊಡ್ಡೂರು ಗ್ರಾಮದಲ್ಲಿ ಮಂಗಳವಾರ ನೂತನ ಗ್ರಾಮ ಪಂಚಾಯಿತಿ ಕಟ್ಟಡದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿಗಳ ಮಹಾ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಕಾಡಶೆಟ್ಟಿಹಳ್ಳಿ ಸತೀಶ ಮಾತನಾಡಿ, ಗ್ರಾಮಗಳ ಅಭಿವೃದ್ಧಿಯಲ್ಲಿ ಗ್ರಾ.ಪಂ ಸದಸ್ಯರ ಪಾತ್ರ ದೊಡ್ಡದು. ಅಧಿಕಾರ ವಿಕೇಂದ್ರೀಕರಣ ಮಾಡುವ ಉದ್ದೇಶದಿಂದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಜಾರಿಗೆ ತಂದರು. ಆಗಿನ ಕಾಲದಲ್ಲಿ ಅದೊಂದು ದೊಡ್ಡ ಕ್ರಾಂತಿಯೇ ಆಗಿತ್ತು. ಕರ್ನಾಟಕದಲ್ಲಿ ಜಾರಿಗೆ ಬಂದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬೇರೆ ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು ಸ್ವತಃ ಕರ್ನಾಟಕಕ್ಕೆ ಬಂದು ಅದರ ಕುರಿತು ಅಭ್ಯಾಸ ಮಾಡಿದ್ದಲ್ಲದೆ ಅದೇ ವ್ಯವಸ್ಥೆಯನ್ನು ತಮ್ಮ ರಾಜ್ಯದಲ್ಲೂ ಅಳವಡಿಸಿದ್ದು ಒಂದು ಇತಿಹಾಸವಾಗಿದೆ ಎಂದರು.
ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ ಈಳಿಗೇರ, ಮಾಜಿ ಶಾಸಕ ರಾಮಣ್ಣ ಲಮಾಣಿ, ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ನಾಗರಾಜ ಮಡಿವಾಳರ, ಅಮರಪ್ಪ ಗುಡಗುಂಟಿ, ಸುನೀಲ ಮಹಾಂತಶೆಟ್ಟರ, ದೇವಣ್ಣ ತೋಟದ, ಸಂಜೀವಗೌಡ ಪಾಟೀಲ ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ಸುಶೀಲಾ ಶಿವಪುತ್ರಪ್ಪ ಲಮಾಣಿ, ಸರ್ವ ಸದಸ್ಯರು, ಜಿ.ಪಂ ಇಲಾಖೆ ಇಇಇ ಮಲ್ಲಿಕಾರ್ಜುನ ಪಾಟೀಲ, ಪಿಡಿಒ ರಿಯಾಜ್ ಕೆ.ಕೆ., ಕಾರ್ಯದರ್ಶಿ ರಾಮಯ್ಯ ಗುರುವಿನ, ಎಸ್.ಪಿ. ಬಳಿಗಾರ, ಎಂ.ಎಸ್. ದೊಡ್ಡಗೌಡ್ರ, ಫಕ್ಕೀರೇಶ ಮ್ಯಾಟಣ್ಣವರ, ಜಗದೀಶ ಹುಲಿಗೆಮ್ಮನವರ, ಗುತ್ತಿಗೆದಾರ ದುದ್ದುಸಾಬ್ ಗೋನಾಳ, ಮಲ್ಲೇಶ ಮಣ್ಣಮ್ಮನವರ, ಕೃಷ್ಣ ಲಮಾಣಿ ಮತ್ತಿತರರು ಇದ್ದರು. ನೀಲಪ್ಪ ಹಡಪದ ಸ್ವಾಗತಿಸಿದರು. ಈಶ್ವರ ಮೆಡ್ಲೇರಿ ನಿರೂಪಿಸಿದರು.
ಸಾನ್ನಿಧ್ಯ ವಹಿಸಿದ್ದ ಹೂವಿನಶಿಗ್ಲಿ ವಿರಕ್ತಮಠದ ಚನ್ನವೀರ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಜಕಾರಣದಲ್ಲಿ ಧರ್ಮ ಇರಬೇಕು. ಆದರೆ ಧರ್ಮದಲ್ಲಿ ರಾಜಕಾರಣ ಬರಬಾರದು. ದೊಡ್ಡೂರು ಗ್ರಾ.ಪಂ ಆಡಳಿತ ಮಂಡಳಿ ಸದಸ್ಯರು ಸರ್ಕಾರದ ಅನುದಾನವನ್ನು ಸದುಪಯೋಗಪಡಿಸಿಕೊಂಡು ಉತ್ತಮ ಕಟ್ಟಡ ನಿರ್ಮಿಸಿಕೊಂಡಿದ್ದು ಶ್ಲಾಘನೀಯ. ಅಧಿಕಾರ ಸಿಕ್ಕಾಗ ನಾಲ್ಕು ಜನರಿಗೆ ಅನುಕೂಲವಾಗುವ ಕೆಲಸ ಮಾಡಬೇಕು. ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ ಈಳಿಗೇರ ಅವರು ಎಲ್ಲ ಸದಸ್ಯರ ಸಹಕಾರದಿಂದ ಅತ್ಯುತ್ತಮ ಕಟ್ಟಡ ನಿರ್ಮಿಸಿದ್ದು ಇತರರಿಗೆ ಮಾದರಿಯಾಗಿದೆ ಎಂದರು.



