ವಿಜಯಸಾಕ್ಷಿ ಸುದ್ದಿ, ಗದಗ: ಹುಬ್ಬಳ್ಳಿಯ ಸಿದ್ಧಾರೂಢ ಮಠವು ಸಮಾಜದಲ್ಲಿ ಸರ್ವ ಜನಾಂಗದವರನ್ನೂ ಸಮಾನವಾಗಿ ಕಾಣುವ ಅತ್ಯಂತ ಪ್ರಮುಖ ಶ್ರದ್ಧಾ ಕೇಂದ್ರವಾಗಿದೆ ಎಂದು ಕಾನೂನು ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಬುಧವಾರ ನಗರದ ತೋಂಟದಾರ್ಯ ಮಠದ ಆವರಣದಲ್ಲಿ ಶ್ರೀ ಸಿದ್ಧಾರೂಢರ 190ನೇ ಜಯಂತಿ, ಶ್ರೀ ಗುರುನಾಥಾರೂಢರ 115ನೇ ಜಯಂತಿ ಹಾಗೂ ಶ್ರೀ ಸಿದ್ಧಾರೂಢ ಕಥಾಮೃತ ಗ್ರಂಥದ ಶತಮಾನೋತ್ಸವದ ಹಿನ್ನೆಲೆಯಲ್ಲಿ ಆರಂಭವಾದ ಸಿದ್ಧಾರೂಢರ ಜ್ಯೋತಿ ರಥ ಯಾತ್ರೆಯನ್ನು ಸ್ವಾಗತಿಸಿ ಅವರು ಮಾತನಾಡಿದರು.
ಎಲ್ಲ ಮಠ-ಮಂದಿರಗಳು ಎಲ್ಲರನ್ನು ಭಾತೃತ್ವ ಭಾವದಿಂದ ನೋಡುವ ತತ್ವ ಸಿದ್ಧಾಂತವನ್ನು ಸಿದ್ಧಾರೂಢ ಮಠ ಹೊಂದಿದೆ. ಸಮಾಜದಲ್ಲಿ ಸೌಹಾರ್ದತೆ ಇರಬೇಕು. ಎಲ್ಲರ ಬದುಕು ಸಮಭಾವದಿಂದ ಕೂಡಿರಬೇಕು ಎನ್ನುವ ಆಶಯ ಹೊಂದಿರುವ ಸಿದ್ಧಾರೂಢರ ಜ್ಯೋತಿ ರಥಯಾತ್ರೆ ಗದಗ ಪರಿಸರಕ್ಕೆ ಆಗಮಿಸಿರುವುದು ಸಂತಸ ತಂದಿದೆ ಎಂದರು.
ಸಮಾರಂಭದಲ್ಲಿ ಜ. ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ, ರೋಣ ಶಾಸಕ ಜಿ.ಎಸ್. ಪಾಟೀಲ, ನರಗುಂದ ಶಾಸಕ ಸಿ.ಸಿ. ಪಾಟೀಲ, ಮಾಜಿ ಶಾಸಕ ಹಾಗೂ ಸಿದ್ಧಾರೂಢ ಮಠದ ಟ್ರಸ್ಟ್ ಗೌರವಾಧ್ಯಕ್ಷ ಡಿ.ಆರ್. ಪಾಟೀಲ, ಮಾಜಿ ಶಾಸಕರಾದ ಬಿ.ಆರ್. ಯಾವಗಲ್, ರಾಮಣ್ಣ ಲಮಾಣಿ, ಜಿ.ಎಸ್. ಗಡ್ಡದೇವರಮಠ ಮುಂತಾದವರು ಉಪಸ್ಥಿತರಿದ್ದರು.
ಜ್ಯೋತಿ ರಥಯಾತ್ರೆಯು ಮಂಗಳ ವಾದ್ಯ ಮೇಳದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನೀಲಮ್ಮ ತಾಯಿ ಆಶ್ರಮದ ಮೂಲಕ ಶಿವಾನಂದ ಮಠಕ್ಕೆ ತಲುಪಿತು. ಜ್ಯೋತಿ ರಥಯಾತ್ರೆಯಲ್ಲಿ ನೂರಾರು ಮಹಿಳೆಯರು ಆರತಿ ಹಿಡಿದು ಭಾಗವಹಿಸಿದ್ದರು.
ಸಿದ್ಧಾರೂಢರ ಮೇಲೆ ಜನರ ಭಕ್ತಿ ಎಷ್ಟಿದೆ ಎನ್ನುವುದುಕ್ಕೆ ಹುಲಕೋಟಿ, ದುಂದೂರು, ಬಿಂಕದಕಟ್ಟಿ ಮತ್ತು ಗದಗದಲ್ಲಿ ಜ್ಯೋತಿ ರಥಯಾತ್ರೆಗೆ ಸಿಕ್ಕಿರುವ ಭಕ್ತಿಪೂರ್ವಕ ಸ್ವಾಗತವೇ ಸಾಕ್ಷಿಯಾಗಿದೆ. ಈ ಜ್ಯೋತಿ ರಥಯಾತ್ರೆ ಸರ್ವರಲ್ಲಿ ಸದ್ಭಾವ, ಸಮಭಾವ ಸೃಷ್ಟಿಸುವ ಕೆಲಸ ಮಾಡಲಿ ಎಂದು ಸಚಿವ ಎಚ್.ಕೆ. ಪಾಟೀಲ ಆಶಿಸಿದರು.