ಲಿಂಗಾಯತ ಸಮುದಾಯದ ಜನರಲ್ಲಿ ಗೊಂದಲ ಬೇಡ: ಜಿ.ಎಸ್. ಪಾಟೀಲ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ರೆಡ್ಡಿ ಸಮಾಜದವರು ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ವೀರಶೈವ ಲಿಂಗಾಯತ, ಜಾತಿ ಕಾಲಂನಲ್ಲಿ ರೆಡ್ಡಿ ಲಿಂಗಾಯತ, ಉಪಜಾತಿ ಕಾಲಂನಲ್ಲಿ ರೆಡ್ಡಿ ಲಿಂಗಾಯತ ಎಂದೇ ನಮೂದಿಸಬೇಕು ಎಂದು ಕರ್ನಾಟಕ ರಾಜ್ಯ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ವೀರಶೈವ ಲಿಂಗಾಯತ ರೆಡ್ಡಿ ಸಮಾಜದ ಉಪಾಧ್ಯಕ್ಷ, ರೋಣ ಶಾಸಕ ಜಿ.ಎಸ್. ಪಾಟೀಲ ಸ್ಪಷ್ಟಪಡಿಸಿದರು.

Advertisement

ಬುಧವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವೈಷ್ಣವ ಸಂಪ್ರದಾಯಕ್ಕೆ ಸೇರಿದ ಕೆಲ ರಾಜಕೀಯ ಮುಖಂಡರು ಮೀಸಲಾತಿ ಕಳೆದುಕೊಳ್ಳುತ್ತೇವೆ ಎನ್ನುವ ವದಂತಿ ಹರಿಬಿಟ್ಟು ಮತ್ತು ತಮ್ಮ ಸಂಖ್ಯೆಯನ್ನು ಹೆಚ್ಚು ತೋರಿಸಿಕೊಳ್ಳಲು ಹಿಂದೂ ರೆಡ್ಡಿ ಎಂದು ನಮೂದಿಸುವಂತೆ ಪ್ರಚಾರ ನಡೆಸುತ್ತಿದ್ದಾರೆ. ರಾಜ್ಯದ ಲಿಂಗಾಯತ ಸಮುದಾಯದ ಜನ ಗೊಂದಲಕ್ಕೆ ಒಳಗಾಗದೆ ವೀರಶೈವ ಲಿಂಗಾಯತ ಮಹಾಸಭಾ ಕೈಗೊಂಡ ನಿರ್ಣಯದಂತೆ ಸಮೀಕ್ಷೆಯಲ್ಲಿ ಮಾಹಿತಿ ನಮೂದಿಸಬೇಕು ಎಂದು ವಿನಂತಿಸಿದರು.

ಸಚಿವ ರಾಮಲಿಂಗಾರೆಡ್ಡಿ ಅವರು ಸಮೀಕ್ಷೆಯಲ್ಲಿ ಹಿಂದೂ ರೆಡ್ಡಿ ಎಂದು ನಮೂದಿಸುವಂತೆ ಪ್ರಕಟಣೆ ಹೊರಡಿಸಿರುವುದು ಸರಿಯಲ್ಲ. ಅವರ ನಿರ್ಧಾರಕ್ಕೆ ಅನೇಕ ರೆಡ್ಡಿ ಸಮುದಾಯದ ನಾಯಕರು ಸಹಮತ ವ್ಯಕ್ತಪಡಿಸಿಲ್ಲ ಎನ್ನುವುದಕ್ಕೆ ಅವರೊಬ್ಬರೇ ಮನವಿ ಮಾಡಿರುವ ಜಾಹೀರಾತು ಸಾಕ್ಷಿಯಾಗಿದೆ. ಹೀಗಾಗಿ 14ನೇ ಶತಮಾನದ ಶಿವಶರಣೆ ಹೇಮರಡ್ಡಿ ಮಲ್ಲಮ್ಮನ ಅನುಯಾಯಿಗಳಾದ ನಾವೆಲ್ಲರೂ ವೀರಶೈವ ಲಿಂಗಾಯತ ರೆಡ್ಡಿ ಎಂದೇ ನಮೂದಿಸಬೇಕು ಎಂದು ಜಿ.ಎಸ್. ಪಾಟೀಲ ಸ್ಪಷ್ಟಪಡಿಸಿದರು.

ಈ ಸಮೀಕ್ಷೆ ಕೇವಲ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಆಗಿರುವುದರಿಂದ, ಈಗಾಗಲೇ ನಾವು ಪಡೆದುಕೊಳ್ಳುತ್ತಿರುವ ಮೀಸಲಾತಿಗೆ ಯಾವುದೇ ಧಕ್ಕೆ ಆಗುವುದಿಲ್ಲ. ನಾವೆಲ್ಲರೂ ಧೈರ್ಯವಾಗಿ ನಮ್ಮ ಸಮಾಜದ ಸಂಪ್ರದಾಯ, ಸಂಸ್ಕೃತಿಯನ್ನು ರಕ್ಷಣೆ ಮಾಡಿಕೊಂಡು ಮುಂದಿನ ಜನಾಂಗಕ್ಕೆ ನೀಡಬೇಕಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಎಸ್.ಎಸ್. ಪಾಟೀಲ, ವಿಶ್ವನಾಥ ಚಿಂಚಲಿ, ಕುಮಾರಣ್ಣ ಗಡಗಿ, ಸುರೇಶ ಯಳ್ಳುರ, ಮಂಜುನಾಥ ಭಗವತಿ, ಸಿದ್ದಣ್ಣ ಕವಲೂರ, ಭೀಮರಡ್ಡೆಪ್ಪ, ಮಹೇಶ್ ಗಡಗಿ, ಜಗದೀಶ ಅವರೆಡ್ಡಿ, ನಾಗರಾಜ ಚನ್ನಳ್ಳಿ ಇತರರು ಉಪಸ್ಥಿತರಿದ್ದರು.

ಇಷ್ಟಲಿಂಗ ಪೂಜೆ ಮಾಡುತ್ತಿರುವ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಭಾವಚಿತ್ರವನ್ನೇ ಅಧಿಕೃತವಾಗಿ ಬಳಕೆ ಮಾಡಬೇಕು ಎಂದು 2016ರಲ್ಲಿ ಸರಕಾರ ಆದೇಶ ಮಾಡಿದೆ. ವೀರಶೈವ ಲಿಂಗಾಯತ ರೆಡ್ಡಿ ಸಮಾಜವೂ ಇದೇ ಚಿತ್ರವನ್ನು ಅಧಿಕೃತವಾಗಿ ಬಳಕೆ ಮಾಡುತ್ತಿದೆ. ಆದರೂ ಕೆಲ ವೈಷ್ಣವ ಪರಂಪರೆಯ ಮುಖಂಡರು, ಸ್ಥಾವರ ಲಿಂಗಕ್ಕೆ ಕೈ ಮುಗಿದು ನಮಸ್ಕರಿಸುವ ಚಿತ್ರವನ್ನು ಬಳಕೆ ಮಾಡುತ್ತಿರುವುದು ಸರಿಯಲ್ಲ ಎಂದು ಜಿ.ಎಸ್. ಪಾಟೀಲ ಹೇಳಿದರು.


Spread the love

LEAVE A REPLY

Please enter your comment!
Please enter your name here