ಮೈಸೂರು: ಸಿದ್ದರಾಮಯ್ಯ ಸಿಎಂ ಆದಾಗ ಕರ್ನಾಟಕದಲ್ಲಿ ದುಡ್ಡಿಗೆ ಬರ ಉಂಟಾಗುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶದಲ್ಲಿ ಮಾತನಾಡಿದ ಅವರು,
ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ದಿವಾಳಿಯಾಗಿದೆ ಎಂಬ ಪ್ರತಿಪಕ್ಷದವರ ಆರೋಪ ಸುಳ್ಳಿನಿಂದ ಕೂಡಿದೆ. ಸರ್ಕಾರದಲ್ಲಿ ದುಡ್ಡಿಲ್ಲ ಎಂದಾದರೆ, ಶಾಸಕರಿಗೆ 50 ಕೋಟಿ ರೂಪಾಯಿ ಅನುದಾನ ಬಿಡುಗಡೆ ಹೇಗೆ ಸಾಧ್ಯ ಎಂದು ಖರ್ಗೆ ಪ್ರಶ್ನಿಸಿದರು.
ಅದೃಷ್ಟವಶಾತ್, ಸಿದ್ದರಾಮಯ್ಯ ಮುಖ್ಯಮಂತ್ರಿ ಆದಾಗ ಕರ್ನಾಟಕದಲ್ಲಿ ದುಡ್ಡಿಗೆ ಬರ ಉಂಟಾಗುವುದಿಲ್ಲ. ಲಕ್ಷ್ಮೀ ಕಾಲು ಕುಂಟಿಕೊಂಡು ಬಿದ್ದಿರುತ್ತಾಳೆ. ಆದರೆ ಬಿಜೆಪಿ ಅಧಿಕಾರಕ್ಕೆ ಬಂದರೆ, ಸರ್ಕಾರದಲ್ಲಿ ಹಣ ಇರುವುದಿಲ್ಲ ಎಂದು ಖರ್ಗೆ ಟೀಕಿಸಿದರು.
ಗ್ಯಾರಂಟಿ ಯೋಜನೆಗಳನ್ನು ಕರ್ನಾಟಕ ಕಾಂಗ್ರೆಸ್ ಸರ್ಕಾರ ಬಹಳ ಚೆನ್ನಾಗಿ, ಮಾದರಿಯಾಗಿ ಅನುಷ್ಠಾನಗೊಳಿಸಿದೆ. ದೇಶದ ವಿವಿಧ ಕಡೆಗಳಿಗೆ ನಾನು ಪ್ರವಾಸ ಮಾಡುತ್ತಿರುತ್ತೇನೆ. ಎಲ್ಲಿಯೂ ಈ ರೀತಿ ಯೋಜನೆಗಳು ಅನುಷ್ಠಾನವಾಗಿರುವುದನ್ನು ಕಂಡಿಲ್ಲ. ಕೆಲವು ರಾಜ್ಯಗಳಲ್ಲಿ ಬಿಜೆಪಿ ಕೂಡ ಗ್ಯಾರಂಟಿಗಳನ್ನು ನೀಡಿದೆ. ಆದರೆ ಎಲ್ಲಿಯೂ ಸರಿಯಾಗಿ ಅನುಷ್ಠಾನವಾಗಿಲ್ಲ ಎಂದು ಖರ್ಗೆ ದೂರಿದರು.