ಸೋಷಿಯಲ್ ಮೀಡಿಯಾದಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ನಟ, ನಟಿಯರು, ರಾಜಕೀಯ ಗಣ್ಯರು ಸೇರಿದಂತೆ ಹಲವು ಸೆಲೆಬ್ರಿಟಿಗಳಿಗೆ ಕಿಡಿಗೇಡಿಗಳು ಅಶ್ಲೀಲವಾಗಿ ಮೆಸೇಜ್ ಮಾಡುತ್ತಿದ್ದಾರೆ. ಇದೀಗ ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ ಕಂ ನಿರ್ದೇಶಕ ಎಸ್ ನಾರಾಯಣ್ ಹೆಸರಿನಲ್ಲಿ ಕಿಡಿಗೇಡಿಗಳು ಫೇಕ್ ಅಕೌಂಟ್ ಕ್ರಿಯೇಟ್ ಮಾಡಿದ್ದು ಪುನೀತ್ ರಾಜ್‌ಕುಮಾರ್, ಕಿಚ್ಚ ಸುದೀಪ್, ಶಿವರಾಜ್ ಕುಮಾರ್ ಅವರಿಗೆ ಕೆಟ್ಟ ಕೆಟ್ಟ ಕಾಮೆಂಟ್ ಮಾಡಿದ್ದಾರೆ ಎಂದು ಎಸ್ ನಾರಾಯಣ್ ಆರೋಪ ಮಾಡಿದ್ದಾರೆ.
ತಮ್ಮ ಹೆಸರಿನಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಕೆಟ್ಟ ಕೆಟ್ಟದಾಗಿ ಮೆಸೇಜ್ ಮಾಡಿದ್ದಾರೆ ಎಂದು ಎಸ್ ನಾರಾಯಣ್ ಬೆಂಗಳೂರು ಪೊಲೀಸ್ ಕಮೀಷನರ್ ಅವರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್ ನಾರಾಯಣ್, ‘ನಾನು ಎಕ್ಸ್ (ಟ್ವಿಟರ್) ಖಾತೆ ಬಳಸಲ್ಲ. ನನ್ನ ಅಕೌಂಟ್ ಕೂಡ ಇಲ್ಲ. ಯಾರೋ ಅದನ್ನ ನನ್ನ ಹೆಸರಿನಲ್ಲಿ ಓಪನ್ ಮಾಡಿಕೊಂಡು ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್‌ಗಳ ಫೋಟೋ ಹಾಕಿದ್ದಾರೆ. ಅಲ್ಲದೆ ಆ ನಟರನ್ನ ನಾನು ತೆಗಳುವ ಹಾಗೆ ಪೋಸ್ಟ್‌ಗಳನ್ನ ಹಾಕಲಾಗಿದೆ. ಈ ರೀತಿ ಸಾವಿರಾರು ಮೆಸೇಜ್, ಫೋಟೋಗಳು ಬರ್ತಿವೆ. ಈ ವಿಚಾರ ನನಗೆ ನಾಲ್ಕು ದಿನದ ಹಿಂದೆ ಗೊತ್ತಾಯಿತು. ಇದನ್ನ ಕೇಳಿ ನನ್ನ ಮನಸ್ಸಿಗೆ ತುಂಬಾ ನೋವಾಯ್ತು. ಹಾಗಾಗಿ ನಾನು ಪೊಲೀಸರಿಗೆ ದೂರು ಕೊಡುವುದು ನನ್ನ ಕರ್ತವ್ಯ. ಮುಂದೆ ಯಾವುದೇ ಅನಾಹುತಗಳಾಗಬಾರದು ಎಂದು ನಾನು ಬೆಂಗಳೂರು ಪೊಲೀಸ್ ಕಮೀಷನರ್ ಅವರಿಗೆ ದೂರು ಕೊಟ್ಟಿದ್ದೇನೆ’ ಎಂದಿದ್ದಾರೆ.
‘ಪುನೀತ್ ರಾಜ್‌ಕುಮಾರ್ ಅವರ ಬಗ್ಗೆ ತುಂಬಾ ಕೆಟ್ಟದಾಗಿ ಪೋಸ್ಟ್ ಮಾಡಿದ್ದಾರೆ. ಆದರೆ ನಾನು ಪುನೀತ್ ಉತ್ತಮ ಬಾಂಧವ್ಯ ಹೊಂದಿದ್ದೆವು. ಅವರಿಗೆ ಸಿನಿಮಾ ಕೂಡ ಮಾಡಿದ್ದೀನಿ. ಇನ್ನು ಸುದೀಪ್, ಶಿವಣ್ಣ ಅವರೊಂದಿಗೂ ನಾನು ಚೆನ್ನಾಗಿ ಇದ್ದೇನೆ, ಅವರ ಬಗ್ಗೆಯೂ ಕೆಟ್ಟ ಕೆಟ್ಟದಾಗಿ ಪೋಸ್ಟ್ ಮಾಡಿದ್ದಾರೆ. ಯುವರಾಜ್ ಕುಮಾರ್ ನಟನೆಯ ಎಕ್ಕ ಸಿನಿಮಾ ಬಗ್ಗೆ ಏನೇನೋ ಹಾಕಿದ್ದಾರೆ. ಆ ಸಿನಿಮಾ ಬಗ್ಗೆ ನಾನು ಕೆಟ್ಟದಾಗಿ ಕಾಮೆಂಟ್ ಮಾಡಿದಂತಿದೆ’ ಎಂದು ಹೇಳಿದ್ದಾರೆ.
ಈ ಬಗ್ಗೆ ಯಾವ ನಟರು ಕೂಡ ನನಗೆ ಫೋನ್ ಮಾಡಿ, ಈ ಬಗ್ಗೆ ಯಾವುದೇ ಪ್ರಶ್ನೆ ಮಾಡಲಿಲ್ಲ. ನನ್ನ ಸ್ವಭಾವ ಅವರಿಗೆಲ್ಲ ಗೊತ್ತಿರುವುದರಿಂದ ಅವರು ಯಾರೂ ಅಪಾರ್ಥ ಮಾಡಿಕೊಳ್ಳಲ್ಲ. ಆದರೆ ಮುಂದೆ ಇದರಿಂದ ಏನೆಲ್ಲ ಸಮಸ್ಯೆಗಳಾಗಬಹುದು? ಸಮಾಜಕ್ಕೆ ಮಾರಕವಾದ ಸುದ್ದಿ ಬಂದು, ಇಂಡಸ್ಟ್ರಿಗೆ ಹಾನಿಯಾಗಬಹುದು ಎಂಬ ಮುಂಜಾಗ್ರತೆಯಿಂದಾಗಿ ನಾನು ಮೊದಲೇ ದೂರು ಕೊಟ್ಟಿದ್ದೇನೆ’ ಎಂದು ಹೇಳಿದ್ದಾರೆ.
ಈ ಎಲ್ಲ ಕೃತ್ಯಗಳನ್ನು ನೋಡಿದರೆ ನನಗೆ ಕೆಟ್ಟ ಹೆಸರು ತರಬೇಕು ಎಂದೇ ಇದೆಲ್ಲ ಮಾಡಿದಂತೆ ಕಾಣುತ್ತಿದೆ. ಇವರಿಗೆಲ್ಲ ಕೆಲಸ ಇರಲ್ಲ, ಸುಮ್ಮನೆ ಕೂತ್ಕೊಂಡು ಹೀಗೆಲ್ಲ ಮಾಡ್ತಾರೆ. ಇದರಿಂದ ಏನೂ ಪ್ರಯೋಜನವಿಲ್ಲ. ನನ್ನನ್ನಂತೂ ಇವರು ಡ್ಯಾಮೇಜ್ ಮಾಡೋಕೆ ಆಗಲ್ಲ. ಏಕೆಂದರೆ ಚಿತ್ರರಂಗದಲ್ಲಿ ನನಗೆ ಒಳ್ಳೆಯ ಹೆಸರಿದೆ. ಎಲ್ಲರೂ ನನ್ನ ವ್ಯಕ್ತಿತ್ವ ತಿಳಿದುಕೊಂಡಿದ್ದಾರೆ. ನನ್ನ ಹೆಸರಿಗೆ ಮಸಿ ಬಳಿಯೋಕೆ ಈ ಮೂರ್ಖರಿಂದ ಸಾಧ್ಯವಿಲ್ಲ’ ಎಂದಿದ್ದಾರೆ.