ಬೆಳಗಾವಿ:- ವಿಧಾನಪರಿಷತ್‌ನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ಸದಸ್ಯ ಸಿಟಿ ರವಿ ಅಶ್ಲೀಲ ಪದ ಬಳಕೆ ಮಾಡಿದರು ಎಂಬ ವಿಚಾರ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಟಾಪಟಿಗೆ ಕಾರಣವಾಗಿದೆ.
ಏತನ್ಮಧ್ಯೆ, ತಮ್ಮ ಮೇಲೆ ರಕ್ತ ಬರುವಂತೆ ಹಲ್ಲೆ ಮಾಡಿದ್ದು, ಕೊಲೆಗೆ ಸಂಚು ಹೂಡಿದ್ದಾರೆ ಎಂದು ಸಿಟಿ ರವಿ ಪ್ರತಿ ದೂರು ನೀಡಿದ್ದಾರೆ.
ಖಾನಾಪುರ ಠಾಣೆಯಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ, ಕಾನೂನು ಸುವ್ಯವಸ್ಥೆ ಕಾರಣ ಪೊಲೀಸರು ಸಿಟಿ ರವಿಯನ್ನು ಬೆಂಗಳೂರಿಗೆ ಸ್ಥಳಾಂತರ ಮಾಡಲು ಮುಂದಾದರು. ಈ ವೇಳೆಯೂ ಭಾರಿ ಹೈಡ್ರಾಮವೇ ನಡೆಯಿತು. ಬಿಜೆಪಿ ನಾಯಕರು ಏಕಾಏಕಿ ಮುಗಿಬಿದ್ದರು. ಇದರಿಂದ ಭಾರಿ ತಳ್ಳಾಟ, ನೂಕಾಟವೇ ನಡೆಯಿತು.
ಪೊಲೀಸರ ವರ್ತನೆ ವಿರುದ್ಧ ಆಕ್ರೋಶ ಹೊರಹಾಕಿದ ಸಿಟಿ ರವಿ ನನ್ನ ಕೊಲೆಗೆ ಸಂಚು ನಡೆಸಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇನ್ನೂ ಖಾನಾಪುರ ಠಾಣೆಯಲ್ಲಿ ಸಿಟಿ ರವಿ ಬಂಧಿಸಿಡಲಾಗಿತ್ತು. ಠಾಣೆ ಮುಂದೆ ಬಿಜೆಪಿ ಎಂಎಲ್ಸಿ ರವಿಕುಮಾರ್, ಸುಭಾಷ್ ಪಾಟೀಲ್, ಸಂಜಯ್ ಪಾಟೀಲ್, ಸೇರಿದಂತೆ ಮತ್ತಿತ್ತತರು ಸಿ.ಟಿ.ರವಿ ಬಂಧನ ಖಂಡಿಸಿ ಪ್ರತಿಭಟನೆ ಮಾಡಿದ್ದಾರೆ.
ನಂತರ ವಿಪಕ್ಷ ನಾಯಕ ಆರ್.ಅಶೋಕ್, ಬಸನಗೌಡ ಪಾಟೀಲ್ ಯತ್ನಾಳ್, ಸುನೀಲ್ ಕುಮಾರ್, ಅರವಿಂದ ಬೆಲ್ಲದ್, ಮಾಜಿ ಸಚಿವ ಪ್ರಭು ಚೌಹಾಣ್ ಖಾನಾಪುರ ಪೊಲೀಸ್ ಠಾಣೆಗೆ ಲಗ್ಗೆ ಹಾಕಿದ್ದಾರೆ.
ಆದರೆ ಠಾಣೆಯೊಳಗೆ ಯಾರನ್ನೂ ಬಿಡದ ಕಾರಣ ಭಾರಿ ಜಟಾಪಟಿಯೇ ನಡೆಯಿತು. ಪೊಲೀಸ್ ನಡೆಗೆ ಕೆರಳಿದ ಆರ್.ಅಶೋಕ್, ನಾನು ಸಹ ಹೋಂ ಮಿನಿಸ್ಟರ್ ಆಗಿ ಕೆಲಸ ಮಾಡಿದ್ದೇನೆ. ಇದೆಲ್ಲವೂ ನಡೆಯೋದಿಲ್ಲ, ಕಮಿಷನರ್ಗೆ ನಿಮ್ಮನ್ನ ನೋಡಿಕೊಳ್ತೇನೆ ಎಂದು ಎಚ್ಚರಿಕೆ ನೀಡಿದರು.