ವಿಜಯಸಾಕ್ಷಿ ಸುದ್ದಿ, ಗದಗ : ವಿಜ್ಞಾನ ವಿಷಯದ ಬಗ್ಗೆ ವಿದ್ಯಾರ್ಥಿಗಳಿಗೆ ಕುತೂಹಲ ಹಾಗೂ ಆಸಕ್ತಿ ಹೆಚ್ಚಾಗಿರುತ್ತದೆ. ವಿಜ್ಞಾನ ಎನ್ನುವದು ಒಂದು ವಿಸ್ಮಯಕಾರಿ, ಸತ್ಯಕ್ಕೆ ಸಮೀಪವಿರುವ ವಿಷಯವಾಗಿದೆ. ಕಾರಣ ಎಲ್ಲ ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವನೆಯಿಂದ ಅಲೋಚಿಸಬೇಕು ಎಂದು ಉಪನಿರ್ದೇಶಕರ ಕಾರ್ಯಾಲಯದ ಶಿಕ್ಷಣಾಧಿಕಾರಿ ಮಹಾದೇವಿ ಮಾಡಲಗೇರಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಗದಗ ಶಹರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಫೆ. ೧೬ರಂದು ನಡೆದ ಐದನೇ ದಿನದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ವಿಜ್ಞಾನ ವಿಷಯದ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದ ವಿದ್ಯಾರ್ಥಿಗಳೊಂದಿಗೆ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಹೆಚ್ಚಾಗಿ ರಾಸಾಯನಿಕ ಸಮೀಕರಣಗಳು, ಜೀವ ವಿಕಾಸ, ವಿಜ್ಞಾನ ಚಿತ್ರಗಳ ಬಗ್ಗೆ, ಸರಳ ತಿಳುವಳಿಕೆಯ ಮಾರ್ಗಗಳು, ವಿಜ್ಞಾನ ಸೂತ್ರಗಳನ್ನು ಹೇಗೆ ನೆನಪಿಟ್ಟುಕೊಳ್ಳುವದು, ನೂರಕ್ಕೆ ನೂರು ಅಂಕಗಳನ್ನು ಗಳಿಸುವ ಕೌಶಲ್ಯ ಮುಂತಾದವುಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿ ಪರಿಹಾರ ಪಡೆದುಕೊಂಡರು.
ಅಕ್ಷರ ದಾಸೋಹದ ಶಿಕ್ಷಣಾಧಿಕಾರಿ ಎಸ್.ಡಿ. ಕನವಳ್ಳಿ ಮಾತನಾಡುತ್ತಾ, ವಿಜ್ಞಾನ ವಿಷಯದ ಶಿಕ್ಷಕರು ಹೆಚ್ಚಾಗಿ ಪ್ರಾಯೋಗಿಕವಾಗಿ, ಅಗತ್ಯ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ಮನಮುಟ್ಟುವಂತೆ ತಮ್ಮ ಬೋಧನಾ ವಿಧಾನ ಬೆಳೆಸಿಕೊಳ್ಳಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಭಾಗವಹಿಸಿದ ವಿಜ್ಞಾನ ವಿಷಯದ ಸಂಪನ್ಮೂಲ ವ್ಯಕ್ತಿಗಳು ಮಕ್ಕಳಿಗೆ ಪರೀಕ್ಷೆ ಮುಗಿಯುವರೆಗೆ ಸತತ ಬೆಂಬಲದ ಭರವಸೆ ನೀಡಿದರು. ಕೇವಲ ನೇರ ಫೋನ್ ಇನ್
ಕಾರ್ಯಕ್ರಮದಲ್ಲಿ ಮಾತ್ರವಲ್ಲ ಪರೀಕ್ಷೆ ಪ್ರಾರಂಭವಾಗುವ ಹಿಂದಿನ ದಿನದವರೆಗೂ ಮಕ್ಕಳು ತಾವು ಓದುವಾಗ, ಬರೆಯುವಾಗ ಏನಾದರೂ ಗೊಂದಲಗಳು, ಸಂದೇಹಗಳು ಹಾಗೂ ಸಮಸ್ಯೆಗಳು ಕಂಡು ಬಂದಲ್ಲಿ ಪ್ರತಿದಿನ ಸಾಯಂಕಾಲ ೫.೩೦ರಿಂದ ೬.೩೦ರ ಒಳಗೆ ಈಗಾಗಲೇ ನೀಡಿದ ಸಂಪನ್ಮೂಲ ಶಿಕ್ಷಕರಿಗೆ ದೂರವಾಣಿ ಮೂಲಕ ಸಂಪರ್ಕ ಮಾಡಿ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗದಗ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ವ್ಹಿ.ವ್ಹಿ. ನಡುವಿನಮನಿ, ಡಯಟ್ ಉಪನ್ಯಾಸಕರದಾ ಶಂಕರ ಹಡಗಲಿ, ಕ್ಷೇತ್ರ ಸಮನ್ವಯಾಧಿಕಾರಿ ಹೆಚ್.ಎ. ಫಾರೂಕಿ, ಶಿಕ್ಷಣ ಸಂಯೋಜಕರಾದ ಶ್ಯಾಮ ಲಾಂಡೆ, ಐ.ಬಿ. ಮಡಿವಾಳರ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಪಿ.ಡಿ. ಮಂಗಳೂರ, ಸಂಪನ್ಮೂಲ ಶಿಕ್ಷಕರಾದ ಕೆ.ವ್ಹಿ. ಕೋರಡ್ಡಿ, ಐ.ಎಸ್. ಗೌಡರ, ಎಸ್.ಎಸ್. ಗಂಜಿ, ಎಮ್.ಡಿ. ವಡವಿ, ಫ್ರಾನ್ಸಿಸ್ ಜೋನ್ಸ್, ಎಮ್.ಎಮ್. ಮಕಾನದಾರ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ತೋಂಟದಾರ್ಯ ಪ್ರೌಢಶಾಲೆಯ ಶಿಕ್ಷಕರಾದ ಕೆ.ಎಮ್. ಗೌಡರ ಹಾಗೂ ತೋಂಟದಾರ್ಯ ಪ್ರಾಥಮಿಕ ಶಾಲೆಯ ಪ್ರಧಾನ ಗುರುಗಳಾದ ನಾಗರಾಜ ಗಾಳಿ ಉಪಸ್ಥಿತರಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿಯವರು ಮಾತನಾಡಿ, ವಿದ್ಯಾರ್ಥಿಗಳು ವರ್ಷದ ಪ್ರಾರಂಭದಿAದ ವರ್ಗದ ಕೊಠಡಿಗಳಲ್ಲಿ ಮಾಡಿದ ಪ್ರಯೋಗಗಳು, ವಿಜ್ಞಾನ ವಿಷಯದಲ್ಲಿ ಬರುವ ಚಿತ್ರಗಳನ್ನು ಯಾವುದೇ ತಪ್ಪಿಲ್ಲದಂತೆ ನೆನಪಿನಲ್ಲಿಟ್ಟುಕೊಂಡು ಪರೀಕ್ಷೆಯಲ್ಲಿ ಕೇಳಿದ ಪ್ರಶ್ನೆಗೆ ವಿವರವಾದ, ಆಕರ್ಷಕವಾದ ಬರವಣಿಗೆಯ ಮೂಲಕ ಉತ್ತರಿಸುವಂತೆ ಮಾರ್ಗದರ್ಶನ ಮಾಡಿದರು. ಶಿಕ್ಷಕರು ಕೂಡಾ ಇದೇ ಹಿನ್ನೆಲೆಯಲ್ಲಿ ಮಾರ್ಗದರ್ಶನ ಮಾಡುವಂತೆ ಅವರು ಕರೆ ನೀಡಿದರು.