ಇಂದಿನಿಂದ ನರೇಗಲ್ಲದಲ್ಲಿ `ಥರ್ಡ್ ಐ’ ಕಾರ್ಯಾಚರಣೆ

0
naregal
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಪೊಲೀಸ್ ಇಲಾಖೆಯ ಮೂರನೇ ಕಣ್ಣು (ಥರ್ಡ್ ಐ) ಮಾರ್ಚ್ 1ರಿಂದ ನರೇಗಲ್ಲಿನಲ್ಲಿಯೂ ಕಾರ್ಯಾರಂಭ ಮಾಡಲಿದ್ದು, ಅದು ನಿಮ್ಮನ್ನೇ ನೋಡಲಿದೆ ಎಂದು ರೋಣ ಸಿಪಿಐ ಎಸ್.ಎಸ್. ಬೀಳಗಿ ಹೇಳಿದರು.

Advertisement

ಅವರು ನರೇಗಲ್ಲದ ದುರ್ಗಾ ವೃತ್ತದಲ್ಲಿ ಗುರುವಾರ ವಾಹನ ಸವಾರರಿಗೆ ಗುಲಾಬಿ ಹೂ ನೀಡಿ ಈ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇನ್ನುಮುಂದೆ ನರೇಗಲ್ಲ ಪಟ್ಟಣದಲ್ಲಿ ವಾಹನ ಸವಾರರು ಯಾರೂ ಹೆಲ್ಮೆಟ್ ಧರಿಸದೆ ಸಂಚರಿಸುವಂತಿಲ್ಲ.

ಹೆಲ್ಮೆಟ್ ಇಲ್ಲದೆ ಬೈಕ್ ಚಲಾಯಿಸುತ್ತಿರುವ ದೃಶ್ಯ ಥರ್ಡ್ ಐ ಕ್ಯಾಮೆರಾದಲ್ಲಿ ಸೆರೆಯಾದರೆ ನೇರವಾಗಿ ನಿಮ್ಮ ವಿಳಾಸಕ್ಕೆ 500 ರೂ. ದಂಡದ ನೋಟೀಸ್ ಬರುತ್ತದೆ. ನೀವೇನಾದರೂ ಬೇರೆಯವರಿಗೆ ವಾಹನ ಕೊಟ್ಟು ಕಳಿಸಿದಾಗ, ಅವರು ಹೆಲ್ಮೆಟ್ ಧರಿಸದಿದ್ದರೆ ಆಗಲೂ ದಂಡವನ್ನು ವಾಹನ ಮಾಲೀಕರೇ ಕಟ್ಟಬೇಕು. ಪ್ರತಿ ಬಾರಿಯೂ ನೀವು 500 ರೂಪಾಯಿ ದಂಡ ಕಟ್ಟಬೇಕಾಗುತ್ತದೆ. ಹೀಗಾಗಿ ಯಾರ ಕೈಲಾದರೂ ವಾಹನ ಕೊಡುವ ಮುನ್ನ, ಅಪ್ರಾಪ್ತರ ಕೈಯಲ್ಲಿ ವಾಹನ ಕೊಡುವ ಮುನ್ನ ಜಾಗರೂಕರಾಗಿರಬೇಕು. ತ್ರಿಬಲ್ ರೈಡಿಂಗ್‌ಗೂ 500 ರೂ. ದಂಡ ಕಟ್ಟಬೇಕಾಗುತ್ತದೆ. ವಾಹನ ಚಲಾಯಿಸುತ್ತಿದ್ದಾಗ ನೀವು ಮೊಬೈಲ್ ಬಳಸುವುದು ಕಂಡುಬಂದರೆ ಅದಕ್ಕೂ 500 ರೂ. ದಂಡವಿದೆ ಎಂದು ಹೇಳಿದರು.

third eye

ಕಾರು ಚಾಲಕರು ಬೆಲ್ಟ್ ಧರಿಸದೆ ಕಾರ್ ಚಾಲನೆ ಮಾಡುತ್ತಿದ್ದರೆ 1000ರೂ. ದಂಡ ಕಟ್ಟಬೇಕಾಗುತ್ತದೆ. ಈ ಥರ್ಡ್ ಐ ಕ್ಯಾಮೆರಾವನ್ನು ಕೇವಲ ಸಾರಿಗೆ ನಿಯಮ ಉಲ್ಲಂಘಿಸುವರಿಗೆ ದಂಡ ಕಟ್ಟಲು ಮಾತ್ರವಲ್ಲದೆ, ಅಪರಾಧಗಳನ್ನು ತಡೆಯುವದಕ್ಕಾಗಿ, ಅಪರಾಧಿಗಳನ್ನು ಪತ್ತೆ ಹಚ್ಚುವದಕ್ಕಾಗಿ ಬಳಸಲಾಗುತ್ತದೆ. ಸಾರ್ವಜನಿಕರ ಪ್ರಾಣ ರಕ್ಷಣೆಯ ಜೊತೆಗೆ, ಸಾರಿಗೆ ನಿಯಮಗಳನ್ನು ತಿಳಿಸುವದಕ್ಕೆ ಮತ್ತು ಅಪರಾಧಗಳ ಸಂಖ್ಯೆಯನ್ನು ಕಡಿಮೆ ಮಾಡುವದಕ್ಕೆ ಈ ಕ್ಯಾಮೆರಾ ಸಹಾಯಕವಾಗಲಿದೆ ಎಂದು ತಿಳಿಸಿದ ಸಿಪಿಐ ಬೀಳಗಿ, ಈ ಕಾರ್ಯಕ್ಕೆ ಸಾರ್ವಜನಿಕರೂ ಸಹ ಪೊಲೀಸ್ ಇಲಾಖೆಯ ಜೊತೆಗೆ ಸಹಕರಿಸಿ ಕಾನೂನು ಪಾಲನೆಯಲ್ಲಿ ತೊಡಗಬೇಕೆಂದು ತಿಳಿಸಿದರು.

ನರೇಗಲ್ಲ ಠಾಣೆಯ ಪಿಎಸ್‌ಐ ಶಿವಾನಂದ ಬನ್ನಿಕೊಪ್ಪ ಮಾತನಾಡಿ, ಜಿಲ್ಲಾ ವ್ಯಾಪ್ತಿಯ ಪ್ರತಿ ಠಾಣೆಯಲ್ಲಿಯೂ `ಥರ್ಡ್ ಐ’ ಅಳವಡಿಸಬೇಕೆಂಬ ಸರಕಾರದ ಆದೇಶದಂತೆ ಇಲ್ಲಿಯೂ ಥರ್ಡ್ ಐ ಅಳವಡಿಸಲಾಗಿದೆ. ನರೇಗಲ್ಲ ಪಟ್ಟಣದಲ್ಲಿ ಇನ್ನೂ ಮೂರು-ನಾಲ್ಕು ಕಡೆಗಳಲ್ಲಿ ಈ ಕ್ಯಾಮೆರಾಗಳನ್ನು ಕ್ರಮೇಣ ಅಳವಡಿಸಲಾಗುತ್ತಿದ್ದು, ಇಂದು ಮೊದಲ ಕ್ಯಾಮೆರಾವನ್ನು ಉದ್ಘಾಟಿಸಿದ ಸಿಪಿಐ ಬೀಳಗಿಯವರು ಜನಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ. ಮಾರ್ಚ್ 1ರಿಂದ ಜನರು ಜಾಗೃತರಾಗಿರಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ನರೇಗಲ್ಲ ಪೊಲೀಸ್ ಠಾಣೆಯ ಎಎಸ್‌ಐ ಕೆ.ಆರ್. ಬೇಲೇರಿ, ಮಹಿಳಾ ಕಾನ್‌ಸ್ಟೇಬಲ್ ಎಸ್.ಆರ್. ನದಾಫ್, ಕಾನ್‌ಸ್ಟೇಬಲ್‌ಗಳಾದ ಕೆ.ವಿ. ಹಿರೇಮಠ, ಎಂ.ವೈ. ಉಪ್ಪಾರ, ವಿಜಯ ಗೋದಿಗನೂರ, ಆರ್.ಎಸ್. ಕಪ್ಪತ್ತನವರ, ಮುತ್ತು ಹಡಪದ ಮುಂತಾದವರು ಉಪಸ್ಥಿತರಿದ್ದರು.

ನಿಗದಿಯಾದ ದಂಡವನ್ನು ನಿಗದಿತ ಅವಧಿಯೊಳಗೆ ಕಟ್ಟದಿದ್ದರೆ, ಉದಾಸೀನ ಮಾಡಿದರೆ ವಾಹನವನ್ನು ಜಪ್ತ್ ಮಾಡಲಾಗುವುದು. ಮುಂದುವರೆದು ವಾಹನ ಚಾಲನೆ ಪರವಾನಿಗೆಯನ್ನೂ ರದ್ದು ಮಾಡಬಹುದು. ವಾಹನಗಳ ಮೇಲೆ `ಥರ್ಡ್ ಐ’ ಕೇಸ್‌ಗಳಿದ್ದರೆ ನಿಮ್ಮ ವಾಹನಗಳನ್ನು ಮಾರಾಟ ಮಾಡಲೂ ಸಾಧ್ಯವಾಗುವುದಿಲ್ಲ ಎಂದು ಪಿಎಸ್‌ಐ ಬನ್ನಿಕೊಪ್ಪ ತಿಳಿಸಿದರು.

 


Spread the love

LEAVE A REPLY

Please enter your comment!
Please enter your name here