ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಇತ್ತೀಚೆಗೆ ಗದಗ ಜಿಲ್ಲಾಡಳಿತ ಭವನದಲ್ಲಿ ಜರುಗಿದ ಜಿಲ್ಲಾ ಮಟ್ಟದ ಪರಿಸರ ಸಂರಕ್ಷಣೆ ಪ್ರಬಂಧ ಸ್ಪರ್ಧೆಯಲ್ಲಿ ಸಮೀಪದ ಕೋಟುಮಚಗಿ ಗ್ರಾಮದ ಶ್ರೀ ಸೋಮೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿನಿ ನಿವೇದಿತಾ ಗದಗಿನಮಠ ತೃತೀಯ ಸ್ಥಾನ ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾಳೆ ಎಂದು ಮುಖ್ಯ ಶಿಕ್ಷಕಿ ಟಿ.ಜಿ. ಕಂಬಾಳಿಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಚಾಲನೆ ನೀಡಿದ್ದ ಕರ್ನಾಟಕ ಮಾಲಿನ್ಯ ಮಂಡಳಿಗೆ 50 ವರ್ಷಗಳು ಪೂರೈಸಿರುವ ಹಿನ್ನೆಲೆಯಲ್ಲಿ ಗದಗ ಜಿಲ್ಲಾಡಳಿತ ಭವನದಲ್ಲಿ ಗದಗ, ಧಾರವಾಡ ಮತ್ತು ಕಾರವಾರ ಜಿಲ್ಲೆಗಳ ವಿದ್ಯಾರ್ಥಿಗಳಿಗಾಗಿ ಪರಿಸರ ಮಾಲಿನ್ಯ ಮತ್ತು ಸಂರಕ್ಷಣೆ ಕುರಿತ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗಾಗಿ ಚಿತ್ರಕಲೆ, ಭಾಷಣ, ಪ್ರಬಂಧ ಮತ್ತು ರೀಲ್ಸ್ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಪ್ರಬಂಧ ವಿಭಾಗದಲ್ಲಿ ನಿವೇದಿತಾ ಗದಗಿನಮಠ ತೃತೀಯ ಸ್ಥಾನ ಪಡೆದಿದ್ದಾಳೆ.
ಕಾರ್ಯಕ್ರಮದಲ್ಲಿ ರಾಜ್ಯ ಮಾಲಿನ್ಯ ಮಂಡಳಿ ಅಧ್ಯಕ್ಷ ನರೇಂದ್ರಸ್ವಾಮಿ, ಶಾಸಕರಾದ ಮಹೇಶ ಟೆಂಗಿನಕಾಯಿ, ಪ್ರಸಾದ ಅಬ್ಬಯ್ಯ, ಐ.ಜಿ. ಸನದಿ, ಧಾರವಾಡ ಡಿಸಿ ದಿವ್ಯಪ್ರಭು, ಧಾರವಾಡ ಮಹಾನಗರ ಪಾಲಿಕೆ ಅಧ್ಯಕ್ಷೆ ಪಾಟೀಲ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.
ಸಾಧಕ ವಿದ್ಯಾರ್ಥಿನಿಗೆ ಸೋಮೇಶ್ವರ ಶಿಕ್ಷಣ ಸಮಿತಿಯ ಅಧ್ಯಕ್ಷ ಆರ್.ವಿ. ಕುಲಕರ್ಣಿ, ಗೌರವ ಕಾರ್ಯದರ್ಶಿ ಎಂ.ಬಿ. ರಮಾಣಿ, ಸದಸ್ಯರು ಮತ್ತು ಸಿಬ್ಬಂದಿ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.


