ಬೆಂಗಳೂರು: ಪ್ರಧಾನ ಮಂತ್ರಿ ಮೋದಿಯವರ ಈ ಆಟಿಟ್ಯೂಡ್ ಸರಿ ಇಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ಹೊರಹಾಕಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಪೆಹಲ್ಗಾಮ್ ದಾಳಿ ವಿಚಾರವಾಗಿ ಪ್ರಧಾನ ಮಂತ್ರಿಗಳು ಸರ್ವ ಪಕ್ಷಗಳ ಸಭೆ ಕರೆದಿದ್ದರು.
ನಾವು ಎಲ್ಲರೂ ಹೋಗಿದ್ದೆವು. ಎಲ್ಲರೂ ಭಾಗಿಯಾಗಿದ್ದೆವು. ಲೋಕಸಭೆ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರು ಕೂಡ ಇದ್ದರು. ಸರ್ಕಾರ ಒಂದು ಸಭೆಯನ್ನ ಕರೆದ ನಂತರ ಸರ್ಕಾರದ ವತಿಯಿಂದ ಪ್ರಧಾನ ಮಂತ್ರಿ ಹಾಜರಿರಬೇಕಿತ್ತು.
ಆದರೆ, ಅವರ ಹಾಜರಾತಿ ಇರಲಿಲ್ಲ. ಈ ನಡೆ ಸರಿಯಲ್ಲ. ಇಂತಹ ಘಟನೆ ನಡೆದಿದೆ. ಸುಮಾರು 26 ಜನರು ಮೃತಪಟ್ಟಿದ್ದಾರೆ. ಅನೇಕ ಜನರು ಗಾಯಾಳುಗಳಾಗಿದ್ದಾರೆ. ಪ್ರಧಾನ ಮಂತ್ರಿಗಳ ಈ ಆಟಿಟ್ಯೂಡ್ ಸರಿ ಇಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಪಹಲ್ಗಾಮ್‌ನಲ್ಲಿ ಏನಾಯ್ತು? ಜಾತಿ ಕೇಳಿ, ಧರ್ಮ ಕೇಳಿ ಬಲಿ ಹಾಕಿದರು. ಆ ರೀತಿ ನಡೆಯಬಾರದು. ಈ ರಾಜ್ಯದಲ್ಲೂ ಕೂಡ ಕೆಲವರು ಜಾತಿಯನ್ನು ಆಧರಿಸಿ, ಧರ್ಮವನ್ನೇ ಆಧರಿಸಿ ಮಾತನಾಡುತ್ತಾರೆ. ಅದು ಯಾವುದೇ ಕಾರಣಕ್ಕೂ ನಡೆಯಬಾರದು. ಶಿಕ್ಷಣ ಸಂಸ್ಥೆಯಲ್ಲಿ ನಾನು ಜಾತಿ ಧರ್ಮದ ಬಗ್ಗೆ ಮಾತನಾಡುವುದಿಲ್ಲ. ನೀವು ವಿದ್ಯಾರ್ಥಿಗಳು ಕೂಡ ಜಾತಿ-ಧರ್ಮದ ಬಗ್ಗೆ ಮಾತನಾಡಬಾರದು ಎಂದರು.