ಬೆಳಗಾವಿ: ಕಾಂಗ್ರೆಸ್ ಸರ್ಕಾರದ ಬಳಿ ಹಣವಿಲ್ಲದೇ ಪಾಪರ್ ಆಗಿದೆ. ಜನರ ಮೇಲೆ ವಿಪರೀತ ತೆರಿಗೆ ಹಾಕಿ ಹಣ ವಸೂಲಿ ಮಾಡಲು ಹೊರಟಿರುವ ಇದೊಂದು ಕೆಟ್ಟ ಸರ್ಕಾರ ಎಂದು ವಿಪಕ್ಷ ನಾಯಕ ಆರ್. ಅಶೋಕ ಆರೋಪಿಸಿದ್ದಾರೆ. ಬೆಳಗಾವಿಯ ಖಾಸಗಿ ಹೋಟೆಲ್ನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ರಾಜ್ಯದಲ್ಲಿ ದಲಿತರ ಹಣ ದುರ್ಬಳಕೆ ಆಗಬಾರದು. ದಲಿತರಿಗೆ ಮೀಸಲಿಟ್ಟ ಹಣ ಅವರ ಕೇರಿಗಳ ಅಭಿವೃದ್ಧಿಗೆ ಬಳಸುವುದು ಬಿಟ್ಟು ನಿಮ್ಮ ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಿದ್ದೀರಿ.
ರಾಜ್ಯದಲ್ಲಿ ಬರಗಾಲ ಉಂಟಾಗಿರುವ ಸಂದರ್ಭದಲ್ಲಿ ಸರ್ಕಾರ ರಾಜ್ಯದ ಜನತೆ ಮೇಲೆ ಹೆಚ್ಚಿನ ತೆರಿಗೆ ಹೇರುತ್ತಿದೆ ಎಂದು ಕಿಡಿಕಾರಿದರು.ಚುನಾವಣೆಗೂ ಮುಂಚೆ ವೋಟ್ಗಾಗಿ ಗ್ಯಾರೆಂಟಿ ಘೋಷಿಸಿದರು. ಈಗ ಅವುಗಳಿಗೆ ಹಣ ಬಳಸಿ ರಸ್ತೆ ಅಭಿವೃದ್ಧಿ, ಆಸ್ಪತ್ರೆ, ಶಾಲೆಗಳು ಮತ್ತು ರೈತರಿಗೆ ಕೊಡೋಕೆ ಇವರ ಬಳಿ ಹಣವಿಲ್ಲ. ಆದರೆ ಅಲ್ಪಸಂಖ್ಯಾತರಿಗೆ ಮಾತ್ರ ಕೋಟಿ ಕೋಟಿ ಹಣ ಕೊಡ್ತೀನಿ ಅಂತ ಹೇಳ್ತಾರೆ. ಸರ್ಕಾರ ಅಲ್ಪಸಂಖ್ಯಾತರ ಓಲೈಕೆ ಮಾಡ್ತಿದೆ.
ರಾಜ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಒಣಮೇವು, ಹಸಿ ಮೇವಿನ ಅಭಾವ ಉಂಟಾಗಿದೆ. ಆದರೂ ರಾಜ್ಯದ ಯಾವ ಭಾಗದಲ್ಲಿಯೂ ಗೋಶಾಲೆ ತೆರೆದಿಲ್ಲ. ಕಾಂಗ್ರೆಸ್ ಸರ್ಕಾರ ಎಡಬಿಡಂಗಿ ಸರ್ಕಾರ.ಬರದ ಚರ್ಚೆ ಮುಗಿದ ಬಳಿಕ ಉತ್ತರ ಕರ್ನಾಟಕದ ನೀರಾವರಿ ಸಮಸ್ಯೆಗಳು ಸೇರಿ ಇನ್ನಿತರ ಸಮಸ್ಯೆಗಳ ಬಗ್ಗೆ ಚರ್ಚೆ ಆಗಬೇಕೆಂದು ಸ್ಪೀಕರ್ ಅವರ ಬಳಿ ನಾನು ಮನವಿ ಮಾಡಿಕೊಂಡಿದ್ದೇನೆ. ಅವರು ಕೂಡ ಒಪ್ಪಿದ್ದಾರೆ. ಇವತ್ತೂ ಅವರ ಮುಂದೆ ಬೇಡಿಕೆ ಇಡುತ್ತೇನೆ ಎಂದು ಹೇಳಿದರು