HomeGadag Newsಇದು ರಸ್ತೆಯಲ್ಲ, ಕೆಸರು ಗದ್ದೆ!

ಇದು ರಸ್ತೆಯಲ್ಲ, ಕೆಸರು ಗದ್ದೆ!

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಮುಖ್ಯ ಬಜಾರ್ ರಸ್ತೆ ಅಭಿವೃದ್ಧಿ ಕಾಮಗಾರಿ ಸ್ಥಗಿತಗೊಂಡಿದ್ದರಿಂದ ಸಾರ್ವಜನಿಕರು ನಿತ್ಯ ಪರದಾಡುವಂತಾಗಿದೆ. ಪಟ್ಟಣದ ಮುಖ್ಯ ಬಜಾರ್ ರಸ್ತೆಯ ಗ್ರಾಮ ಚಾವಡಿಯಿಂದ ಭರಮದೇವರ ಸರ್ಕಲ್‌ವರೆಗಿನ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿರುವದರಿಂದ ನಿತ್ಯ ಸಾರ್ವಜನಿಕರು ಆಡಳಿತವನ್ನು ಶಪಿಸುವಂತಾಗಿದೆ.

ಪುರಸಭೆ 15ನೇ ಹಣಕಾಸಿನ 76 ಲಕ್ಷ ರೂ ಅನುದಾನದಲ್ಲಿ ಮುಖ್ಯ ಬಜಾರ್ ರಸ್ತೆಯ ಗ್ರಾಮ ಚಾವಡಿಯಿಂದ ಭರಮದೇವರ ಸರ್ಕಲ್‌ವರೆಗಿನ 260 ಮೀಟರ್ ರಸ್ತೆ ಅಭಿವೃದ್ಧಿ (ಸಿಸಿ) ಕಾಮಗಾರಿಗೆ ಶಾಸಕ ಡಾ. ಚಂದ್ರು ಲಮಾಣಿ ಎಪ್ರಿಲ್‌ನಲ್ಲಿ ಭೂಮಿಪೂಜೆ ನೆರವೇರಿಸಿದ್ದರು. ಅದಾದ 2-3 ದಿನಗಳಿಗೆ ಕಾಮಗಾರಿ ಪ್ರಾರಂಭಿಸಲಾಯಿತು. ಆಗ ಗುತ್ತಿಗೆದಾರರು ತ್ವರಿತಗತಿಯಿಂದ ಕಾರ್ಯ ಕೈಗೆತ್ತಿಕೊಂಡು 260 ಮೀ ರಸ್ತೆಯ ನಿಗದಿತ ಅಳತೆಯನ್ನು ಅಗೆದು ಹಾಕಿದ್ದು, ಅಂದಿನಿಂದಲೇ ಕೆಲಸ ಸ್ಥಗಿತಗೊಂಡಿದ್ದು ಏಕೆ ಎನ್ನುವದು ಮಾತ್ರ ಪ್ರಶ್ನೆಯಾಗಿಯೇ ಉಳಿದಿದೆ.

ಅರ್ಧಂಬರ್ಧ ರಸ್ತೆ ಅಗೆದು ಕೈ ಬಿಟ್ಟಿದ್ದ ಸಂದರ್ಭದಲ್ಲಿ ಸಾರ್ವಜನಿಕರ ಒತ್ತಾಯದಿಂದ ಅಗೆದ ರಸ್ತೆಗೆ ಮಣ್ಣು ಹಾಕಲು ಪ್ರಾರಂಭಿಸಿದ್ದರು. ಆದರೆ ಈ ವೇಳೆ ರಸ್ತೆಗೆ ಹಾಕಲು ಬಳಸುತ್ತಿರುವ ಮಣ್ಣು ಸಂಪೂರ್ಣ ಕಳಪೆಯಾಗಿದ್ದು, ಉತ್ತಮ ಗುಣಮಟ್ಟದ ಕೆಂಪು ಗೊರಸು ಹಾಕುವಂತೆ ಸಾರ್ವಜನಿಕರು ಒತ್ತಾಯಿಸಿದಾಗ, ಸ್ಥಳಕ್ಕೆ ಆಗಮಿಸಿದ್ದ ಪುರಸಭೆ ಅಧ್ಯಕ್ಷೆ ಹಾಗೂ ಮುಖ್ಯಾಧಿಕಾರಿಗಳು ಮಣ್ಣು ಪರೀಕ್ಷೆ ಮಾಡಿಸಿ ನಂತರ ಕಾಮಗಾರಿ ಮಾಡುವದಾಗಿ ಮನವರಿಕೆ ಮಾಡಿದ್ದರು. ಆದರೆ ಅದಾಗಿ 15-20 ದಿನಗಳಾದರೂ ಕೆಲಸ ಅಲ್ಲಿಂದ ಮುಂದೆ ಕದಲದೇ ಇರುವುದು ಜನರ ಅಕ್ರೋಶಕ್ಕೆ ಕಾರಣವಾಗುವಂತಾಗಿದೆ.

ಈ ರೀತಿ ರಸ್ತೆ ಅಗೆದು ಸಂಪರ್ಕ ರಸ್ತೆಗಳಿಂದ ಬರದಂತೆ ಮಣ್ಣು ಹಾಕಿದ್ದರಿಂದ ಇಲ್ಲಿನ ವ್ಯಾಪಾರಸ್ಥರಿಗೆ ಗ್ರಾಹಕರು ಬಾರದಂತಾಗಿದೆ. ಈ ಮುಖ್ಯ ರಸ್ತೆ ಸಂಪರ್ಕ ಕಳೆದ ಎರಡು ತಿಂಗಳಿಂದ ಸಂಪೂರ್ಣ ಕಡಿತಗೊಂಡಿದ್ದರಿಂದ ರೈತರು, ವ್ಯಾಪಾರಸ್ಥರು, ಜನಸಾಮಾನ್ಯರು, ಶಾಲಾ ಮಕ್ಕಳು, ರೋಗಿಗಳು, ವೃದ್ಧರು, ಅಟೋ ಚಾಲಕರ ಪರಿಸ್ಥಿತಿ ಹೇಳತೀರದಾಗಿದೆ.

ಕಳೆದ ಒಂದು ವಾರದ ಹಿಂದೆ ಪೇಟೆ ವ್ಯಾಪಾರಸ್ಥರು ಪುರಸಭೆಯ ನಿರ್ಲಕ್ಷಕ್ಕೆ ಅಕ್ರೋಶಗೊಂಡು ಪುರಸಭೆಗೆ ದೌಡಾಯಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಒಂದು ವಾರದ ಗಡುವು ನೀಡಿದ್ದು, ಇಲ್ಲದಿದ್ದಲ್ಲಿ ಅಂಗಡಿಗಳನ್ನು ಬಂದ್ ಮಾಡಿ ಪುರಸಭೆ ಎದುರಿನಲ್ಲಿ ಪ್ರತಿಭಟನೆ ಮಾಡುವದಾಗಿ ಎಚ್ಚರಿಸಿದ್ದಾರೆ. ಈಗಾಗಲೇ ಗಡುವು ನೀಡಿದ ಸಮಯ ಮುಗಿದಿದ್ದು, ಮುಂದೆ ವ್ಯಾಪಾರಸ್ಥರ ತೀರ್ಮಾನ ಏನಾಗುವದೋ ಎಂಬುದನ್ನು ಕಾಯ್ದು ನೋಡಬೇಕಿದೆ.

ರಸ್ತೆ ಅಗೆದು ಹಾಕಿರುವದರಿಂದ ಜನರಿಗೆ ಅಂಗಡಿಗಳಿಗೆ ಬರಲು ತೊಂದರೆಯಾಗುತ್ತಿದೆ. ಕೆಲವು ವ್ಯಾಪಾರಸ್ಥರು ಸೋಮವಾರ ಸ್ವತಃ ಖರ್ಚು ಮಾಡಿ ಅಗೆದ ರಸ್ತೆಗೆ ಅಲ್ಲಿಯೇ ಇದ್ದ ಮಣ್ಣನ್ನು ಜೆಸಿಬಿ ಮೂಲಕ ಹಾಕಿಕೊಂಡು ಸಂಪರ್ಕ ಕಲ್ಪಿಸಿಕೊಳ್ಳುತ್ತಿದ್ದಾರೆ.

ಕಾಮಗಾರಿಗೆ ಬಳಸುವ ಮಣ್ಣು ಕಳಪೆಯಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಮಣ್ಣಿನ ಗುಣಮಟ್ಟದ ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಅದರ ವರದಿ ಬಂದಿದ್ದು, ಜನರು ಈಗ ಹಾಕಲು ಉದ್ದೇಶಿಸಿರುವ ಮಣ್ಣಿಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಬೇರೆ ಮಣ್ಣನ್ನೇ ಹಾಕಲಾಗುವದು. ವ್ಯಾಪಾರಸ್ಥರು ನೀಡಿದ ಗಡುವಿನೊಳಗೆ ಕಾಮಗಾರಿ ಪ್ರಾರಂಭಿಸಲಾಗುತ್ತಿತ್ತು, ಆದರೆ ಮಳೆಯ ಹಿನ್ನೆಲೆಯಲ್ಲಿ ವಿಳಂಬವಾಗಿದೆ. ಎರಡು ದಿನಗಳಲ್ಲಿ ಕಾಮಗಾರಿ ಪ್ರಾರಂಭಿಸಿ ಶೀಘ್ರದಲ್ಲಿ ಮುಕ್ತಾಯಗೊಳಿಸಲಾಗುವದು.

– ಮಹೇಶ ಹಡಪದ.

ಪುರಸಭೆ ಮುಖ್ಯಾಧಿಕಾರಿ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!