ಬಾಲಿವುಡ್ ಲೆಜೆಂಡ್ ಧರ್ಮೇಂದ್ರ ಅವರ ನಿಧನದ ಬಳಿಕ ಡಿಯೋಲ್ ಕುಟುಂಬ ಮೌನ ನೋವಿನಲ್ಲಿ ಮುಳುಗಿದೆ. ಆದರೆ ಇದೀಗ ಹೇಮಾ ಮಾಲಿನಿ ತಮ್ಮ ನೋವನ್ನು ಮೊದಲ ಭಾರಿಗೆ ತೆರೆದಿಟ್ಟಿದ್ದಾರೆ.
ಸಂದರ್ಶನದಲ್ಲಿ ಭಾವುಕರಾಗಿ ಮಾತನಾಡಿದ ಹೇಮಾ ಮಾಲಿನಿ, “ಧರ್ಮೇಂದ್ರ ಅವರ ಸಾವು ನನ್ನ ಜೀವನದ ಅತಿದೊಡ್ಡ ಶೂನ್ಯ. ಆ ನೋವು ಇನ್ನೂ ನನ್ನ ಮನಸ್ಸನ್ನು ಕಾಡುತ್ತಿದೆ. ಎಲ್ಲರೂ ನಾನು ಬಲಶಾಲಿ ಎನ್ನುತ್ತಾರೆ. ಹೌದು, ನಾನು ಬಲಶಾಲಿ… ಆದರೆ ಕೆಲ ಕ್ಷಣಗಳಲ್ಲಿ ಆ ನೋವು ಮಿತಿ ಮೀರುತ್ತದೆ” ಎಂದು ಹೇಳಿದ್ದಾರೆ.
ಧರ್ಮೇಂದ್ರ ಅವರ ಕೊನೆಯ ದಿನಗಳ ನೆನಪನ್ನು ಹಂಚಿಕೊಂಡ ಅವರು, “ಅವರ ಆರೋಗ್ಯ ಸ್ವಲ್ಪ ಹದಗೆಟ್ಟಾಗ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಮನೆಗೆ ತಂದಾಗ ಅವರು ಚೆನ್ನಾಗಿಯೇ ಇದ್ದರು. ಅವರು ಇನ್ನೂ ನಮ್ಮ ಜೊತೆ ಇರುತ್ತಾರೆ ಎಂದು ನಂಬಿದ್ದೆವು. ಹಿಂದೆಯೂ ಹಲವು ಬಾರಿ ಆಸ್ಪತ್ರೆಗೆ ದಾಖಲಾಗಿದ್ದರೂ ಅವರು ನಗುತ್ತಾ ವಾಪಸ್ ಬಂದಿದ್ದರು. ಈ ಬಾರಿ ಕೂಡ ಅದೇ ಆಗಬಹುದು ಎಂದು ಭಾವಿಸಿದ್ದೆವು. ಆದರೆ ಅದು ಆಗಲಿಲ್ಲ” ಎಂದು ನೋವಿನಿಂದ ಹೇಳಿದರು.
ಇನ್ನು ಕುಟುಂಬ ಸಂಬಂಧದ ಬಗ್ಗೆ ಹರಡುತ್ತಿರುವ ಗಾಸಿಪ್‌ಗಳ ಬಗ್ಗೆ ಕಠಿಣವಾಗಿ ಪ್ರತಿಕ್ರಿಯಿಸಿದ ಅವರು, “ಜನರಿಗೆ ಗಾಸಿಪ್ ಬೇಕು. ನಮ್ಮ ನಡುವೆ ಏನೋ ಸಮಸ್ಯೆ ಇದೆ ಎಂದು ಜನರು ಯಾಕೆ ಭಾವಿಸುತ್ತಾರೆ ಗೊತ್ತಿಲ್ಲ. ಇದು ನಮ್ಮ ಜೀವನ, ನಮ್ಮ ಖಾಸಗಿ ವಿಷಯ. ಇದನ್ನು ವಿವರಿಸುವ ಅಗತ್ಯ ನನಗೆ ಇಲ್ಲ” ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಧರ್ಮೇಂದ್ರ ಅವರ ಜೀವನದ ಬಗ್ಗೆ ಹೆಮ್ಮೆಯಿಂದ ಮಾತನಾಡಿದ ಹೇಮಾ ಮಾಲಿನಿ, “ಅವರು ಬಯಸಿದ್ದ ಎಲ್ಲವನ್ನೂ ಜೀವನದಲ್ಲಿ ಪಡೆದರು. ಲಕ್ಷಾಂತರ ಜನರು ಅವರನ್ನು ಪ್ರೀತಿಸುತ್ತಾರೆ. ಇದು ಅವರ ಜೀವನದ ದೊಡ್ಡ ಸಾಧನೆ” ಎಂದು ಹೇಳಿದ್ದಾರೆ.



