ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಅತೀ ಹೆಚ್ಚು ಜನಮನ್ನಣೆ ಪಡೆದಿರುವ ತಂಡಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂಚೂಣಿಯಲ್ಲಿದೆ. ಒಂದೆಡೆ ಇಂಡಿಯನ್ ಪ್ರೀಮಿಯರ್ ಲೀಗ್ ಜರುಗುತ್ತಿದ್ದರೆ, ಮತ್ತೊಂದೆಡೆ ಪಾಕ್ನಲ್ಲಿ ಪಾಕಿಸ್ತಾನ್ ಸೂಪರ್ ಲೀಗ್ ನಡೆಯುತ್ತಿದೆ. ಒಂದೇ ಸಮಯದಲ್ಲಿ ಎರಡು ಲೀಗ್ಗಳು ಜರುಗುತ್ತಿರುವುದರಿಂದ ಯಾವ ಟೂರ್ನಿ ಬೆಸ್ಟ್ ಎಂಬ ಚರ್ಚೆಗಳು ಕೂಡ ಜೋರಾಗಿದೆ. ಈ ಚರ್ಚೆಗಳ ನಡುವೆಯೇ ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ RCB ಅಭಿಮಾನಿಗಳು ಕಾಣಿಸಿಕೊಂಡಿದ್ದಾರೆ.
ಕರಾಚಿಯ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಿಎಸ್ಎಲ್ನ 6ನೇ ಪಂದ್ಯದಲ್ಲಿ ಲಾಹೋರ್ ಖಲಂದರ್ಸ್ ಹಾಗೂ ಕರಾಚಿ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯವನ್ನು ವೀಕ್ಷಿಸಲು ಆಗಮಿಸಿದ ಅಭಿಮಾನಿಗಳಲ್ಲಿ ಇಬ್ಬರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಫ್ಯಾನ್ಗಳಿದ್ದರು ಎಂಬುದು ವಿಶೇಷ.
ಪಂದ್ಯದ ನಡುವೆ ಆರ್ಸಿಬಿ ಜೆರ್ಸಿ ಧರಿಸಿ ಸ್ಟೇಡಿಯಂನಲ್ಲಿ ಕಾಣಿಸಿಕೊಂಡಿದ್ದ ಇಬ್ಬರ ಫೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋ ವೈರಲ್ ಆಗುತ್ತಿದ್ದಂತೆ, ಇಂಡಿಯನ್ ಪ್ರೀಮಿಯರ್ ಲೀಗ್ ಅಥವಾ ಪಾಕಿಸ್ತಾನ್ ಸೂಪರ್ ಲೀಗ್ ಗಳಲ್ಲಿ ಯಾವುದು ಬೆಸ್ಟ್ ಎಂಬ ಪ್ರಶ್ನೆಗೆ ಈ ಫೋಟೋ ಉತ್ತರ ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ.