ರಾಯಚೂರು:- ಜಲಾಶಯದ ಕ್ರಸ್ಟ್ ಗೇಟ್ ಅಳವಡಿಕೆಗೆ 52 ಕೋಟಿ ಕೊಡಲಾಗದವರು ಕುರ್ಚಿಗಾಗಿ ಶಾಸಕರಿಗೆ 50 ಕೋಟಿ ಕೊಡೋಕೆ ಸಿದ್ಧರಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ತುಂಗಭದ್ರಾ ಜಲಾಶಯದ 33 ಕ್ರಸ್ಟ್ ಗೇಟ್‌ಗಳಲ್ಲಿ 17 ಗೇಟ್ ದುರಸ್ತಿಗೆ ಬಂದಿವೆ. ಒಂದು ಟಿಎಂಸಿ ಹೂಳು ತೆಗೆದ್ರೆ 25 ಸಾವಿರ ಟ್ರಕ್ ಲೋಡ್ ಆಗುತ್ತೆ, ಹೀಗಾಗಿ ಅದು ಕಷ್ಟ ಸಾಧ್ಯ. ಸದ್ಯ 80 ಟಿಎಂಸಿ ನೀರು ಜಲಾಶಯದಲ್ಲಿದೆ, ಎರಡನೇ ಬೆಳೆಗೆ ನೀರು ಕೊಡಬಹುದು. ಆದ್ರೆ ಸರ್ಕಾರ ಕಟ್ಟುನಿಟ್ಟಾಗಿ ಕೊಡಲು ಆಗಲ್ಲ ಅಂತ ಹೇಳಿದೆ. ಕ್ರಸ್ಟ್ಗೇಟ್‌ಗಳ ದುರಸ್ತಿಗೆ 52 ಕೋಟಿ ರೂ. ಟೆಂಡರ್ ಆಗಿದೆ. ಆದ್ರೆ 19ನೇ ಗೇಟ್ ರಿಪೇರಿಯ 1.19 ಕೋಟಿ ರೂ. ಹಣ ಇನ್ನೂ ಪಾವತಿ ಆಗಿಲ್ಲ, ಸಚಿವರು ಕುರ್ಚಿಗಾಗಿ ಒಬ್ಬ ಶಾಸಕರಿಗೆ 50 ಕೋಟಿ ರೂ. ಕೊಡಲು ಸಿದ್ದರಿದ್ದಾರೆ. ಆದರೆ ಸರ್ಕಾರ ಬಳಿ ಕೊಡಲು ಹಣವಿಲ್ಲ ಅಂತ ಆರೋಪಿಸಿದರು.
ಸರ್ಕಾರದ್ದು ದಪ್ಪ ಚರ್ಮ ಹೆಚ್ಚು ತಲೆ ಕೆಡಿಸಿಕೊಳ್ಳಲ್ಲ. ಹೀಗಾಗಿ ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತೆ. ಚಳಿಗಾಲದ ಅಧಿವೇಶನದಲ್ಲಿ ನಮ್ಮ ಶಾಸಕರು ಈ ಬಗ್ಗೆ ಗಂಭೀರವಾಗಿ ಧ್ವನಿ ಎತ್ತುತ್ತಾರೆ. ಎರಡನೇ ಬೆಳೆಗೆ ನೀರು ಹರಿಸಬೇಕು ಅಥವಾ ಸಾಲಮನ್ನಾ ಮಾಡಬೇಕು. ಇಲ್ಲ ಎಕರೆಗೆ 25 ಸಾವಿರ ರೂ ಪರಿಹಾರ ಕೊಡಬೇಕು. ಮೂರರಲ್ಲಿ ಒಂದಾದ್ರೂ ಮಾಡಬೇಕು, ಇಲ್ಲದಿದ್ರೆ ಟಿಬಿ ಡ್ಯಾಂಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.



