ವಿಜಯಸಾಕ್ಷಿ ಸುದ್ದಿ, ಗದಗ: ವಚನ ಸಾಹಿತ್ಯ ಅದೊಂದು ಬೆಳಕು. ಜಗತ್ತಿಗೆ ಹೊಸ ಮಾರ್ಗವನ್ನು, ಸಮ ಸಮಾಜವನ್ನು ಹುಟ್ಟು ಹಾಕುವಲ್ಲಿ ಬಸವಾದಿ ಶರಣರು ನಡೆಸಿದ ಚಳುವಳಿ ಎಲ್ಲರಿಗೂ ದಾರಿದೀಪಗಳಾಗಿವೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುವ ಧ್ಯೇಯದಂತೆ ನಡೆದವರು 12ನೇ ಶತಮಾನದ ಶರಣರೆಂದು ಪ್ರೊ. ಎನ್.ಎಂ. ಪವಾಡಿಗೌಡ್ರ ಹೇಳಿದರು.
ಅವರು ತಾಲೂಕಾ ಶರಣ ಸಾಹಿತ್ಯ ಪರಿಷತ್ತು ಮತ್ತು ತಾಲೂಕಾ ಕದಳಿ ಮಹಿಳಾ ವೇದಿಕೆ ಗದಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ತೋಂಟದಾರ್ಯ ಮಠದ ಆವರಣದ ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯಾಲಯದಲ್ಲಿ ಜರುಗಿದ ವಚನ ಸಂಶೋಧನಾ ಪಿತಾಮಹ ಡಾ. ಫ.ಗು. ಹಳಕಟ್ಟಿಯವರ 145ನೇ ಜಯಂತಿ ಹಾಗೂ ಶ್ರೀ ಬಸವರಾಜ ಅಂಗಡಿಯವರ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ `ಬಸವಾದಿ ಶಿವಶರಣರ ಸಾಹಿತ್ಯ ಪ್ರಸಾರ, ಮುದ್ರಣ ಸೇವೆ’ ಎಂಬ ವಿಷಯದ ಕುರಿತು ಮಾತನಾಡುತ್ತಿದ್ದರು.
ಜಯಶ್ರಿ ಬಿ.ಪಟ್ಟಣಶೆಟ್ಟಿ ಬಸವರಾಜ ಅಯ್ಯಪ್ಪ ಅಂಗಡಿಯವರ ಕುರಿತು ಮಾತನಾಡುತ್ತ, ಗದುಗಿಗೆ ಮೊದಲು ಲ್ಯಾಮಿನೇಶನ್, ಸ್ಪರ್ಧಾ ಕೈಪಿಡಿಗಳನ್ನು ತಂದವರು ನಮ್ಮ ತಂದೆಯವರು. ಅವರು ವ್ಯಕ್ತಿ ಆಗಿರಲಿಲ್ಲ ಶಕ್ತಿಯಾಗಿದ್ದರು ಎಂದು ಸ್ಮರಿಸಿದರು.
ಇದೇ ಸಂದರ್ಭದಲ್ಲಿ ಶ್ರೀ ಸುರೇಶ ಬಿ.ಅಂಗಡಿಯವರು ತಮ್ಮ ತಂದೆಯವರ ಪರಿಶ್ರಮದ ಕುರಿತು ಮಾತನಾಡಿದರು. ಪ್ರೊ. ಎಂ.ಯು. ಹಿರೇಮಠ, ಅತಿಥಿಗಳಾಗಿ ಆಗಮಿಸಿದ್ದ ಬಸವದಳದ ಅಧ್ಯಕ್ಷರಾದ ವಿ.ಕೆ. ಕರಿಗೌಡ್ರ ಮಾತನಾಡಿದರು.
ಶರಣೆ ಗಂಗಮ್ಮ ಹೂಗಾರ ಪ್ರಾರ್ಥಿಸಿದರು. ಶರಣೆ ಜ್ಯೋತಿ ಹೆರಲಗಿ ಸ್ವಾಗತಿಸಿದರು. ಪ್ರೊ. ಸಿದ್ಧಲಿಂಗೇಶ ಎ.ಸಜ್ಜನಶೆಟ್ಟರ ನಿರೂಪಿಸಿದರು. ಎಂ.ಬಿ. ಲಿಂಗದಾಳ ವಂದಿಸಿದರು. ಕೊನೆಗೆ ವಚನ ಮಂಗಲದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ಕಾರ್ಯಕ್ರಮದಲ್ಲಿ ಶರಣ ಎಸ್.ಬಿ. ಮೆಣಸಗಿ, ಪಿ.ಟಿ. ನಾರಾಯಣಪೂರ, ಬೂದಪ್ಪ ಅಂಗಡಿ, ಜಿ.ಪಿ. ಕಟ್ಟಿಮನಿ, ವಿ.ಎಸ್. ಉಪ್ಪಿನ, ಬಸವರಾಜ ವಾರಿ, ಈರಣ್ಣ ಬಡಿಗಣ್ಣನವರ, ಮಲ್ಲಿಕಾರ್ಜುನ ವಾರದ, ಎಚ್.ಬಿ. ತೋಟದ, ಪಟ್ಟಣಶೆಟ್ಟಿ, ಕಾಡಪ್ಪನವರ, ಶರಣೆಯರಾದ ಮಂಜುಳಾ ಹಾಸಿಲಕರ, ರೇಣುಕಾ ಹಾಸಿಲಕರ, ಶ್ರೀಮತಿ ವಾರದ, ಗಿರಿಜಾ ಹಿರೇಮಠ, ಸಹನಾ ಆಲತಗಿ ಮುಂತಾದವರು ಪಾಲ್ಗೊಂಡಿದ್ದರು.
ಅಧ್ಯಕ್ಷತೆ ವಹಿಸಿದ್ದ ಪ್ರಕಾಶ ಟಿ.ಅಸುಂಡಿ ಮಾತನಾಡಿ, 12ನೇ ಶತಮಾನದ ಶರಣರು ವಚನಗಳನ್ನು ಬರೆದರು. ಆದರೆ ಅವು ಮಠ, ಮಂದಿರ, ಮನೆಗಳಲ್ಲಿ ಪೂಜೆಗೊಳ್ಳುತ್ತ, ಕೊನೆಗೆ ಜೀರ್ಣಗೊಂಡು ಹಾಳಾಗುವ ಸಂದರ್ಭ ಇತ್ತು. ಇಂಥ ಸಂದರ್ಭದಲ್ಲಿ ವಕೀಲರಾದ ಫ.ಗು. ಹಳ್ಳಕಟ್ಟಿಯವರು ತಮ್ಮ ಕಕ್ಷಿದಾರರ ಮನೆಗೆ ಹೋದಾಗ ಆ ಅಪೂರ್ವ ಸಂಪತ್ತನ್ನು ಕಂಡು ಅವರ ಮನವೊಲಿಸಿ ಆ ವಚನ ಕಟ್ಟುಗಳನ್ನು ತಂದು ಸಂರಕ್ಷಿಸಿ, ಕೊನೆಗೆ ಮನೆ ಮಾರಿ ವಚನಗಳನ್ನು ಅಚ್ಚು ಹಾಕಿಸಿ ವಚನ ಸಾಹಿತ್ಯವೆಂಬ ಸಂಪತ್ತನ್ನು ಈ ಜಗದ ಕಣ್ಣಿಗೆ ತಂದರು ಎಂದು ಸ್ಮರಿಸಿದರು.



