ವಿಜಯಸಾಕ್ಷಿ ಸುದ್ದಿ, ರೋಣ: ತಾಲೂಕಿನ ತಳ್ಳಿಹಾಳ ಗ್ರಾಮದಿಂದ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಪಾದಯಾತ್ರೆ ಹೊರಟಿದ್ದ ಭಕ್ತರ ಮೇಲೆ ಖಾಸಗಿ ಬಸ್ಸೊಂದು ಹರಿದ ಪರಿಣಾಮ ಗ್ರಾಮದ ಮೂವರು ಸ್ಥಳದಲ್ಲಿಯೇ ಮೃತರಾಗಿರುವ ದುರ್ಘಟನೆ ಸೋಮವಾರ ಮಧ್ಯರಾತ್ರಿ ನಡೆದಿದ್ದು, ಇಡೀ ಗ್ರಾಮದಲ್ಲಿ ಕಾರ್ಗತ್ತಲು ಆವರಿಸುವಂತೆ ಮಾಡಿದೆ.
ರವಿವಾರ ರಾತ್ರಿ 9ಕ್ಕೆ ತಳ್ಳಿಹಾಳ ಗ್ರಾಮದಿಂದ 7 ಜನ ಭಕ್ತರು ಹುಲಿಗೆಮ್ಮ ದೇವಸ್ಥಾನಕ್ಕೆ ಪಾದಯಾತ್ರೆ ಹೊರಟಿದ್ದರು. ದೇವಸ್ಥಾನ ಅಣತಿ ದೂರದಲ್ಲಿರುವಾಗಲೇ ಕೊಪ್ಪಳ ಜಿಲ್ಲೆಯ ಕುಕುಂಬಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಬಸ್ ಪಾದಯಾತ್ರಿಕರ ಮೇಲೆ ಹರಿದಿದೆ. ಇದರಿಂದ ಗ್ರಾಮದ ಮೂವರು ಸ್ಥಳದಲ್ಲಿಯೇ ಮೃತರಾಗಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಓರ್ವ ಮಹಿಳೆಯ ಸ್ಥಿತಿ ಗಂಭೀರವಾಗಿದೆ.
ಈ ದುರ್ಘಟನೆಯಲ್ಲಿ ತಾಯಿ, ಮಗ ಹಾಗೂ ಪಕ್ಕದ ಮನೆಯ ಓರ್ವ ಯುವಕ ಮೃತರಾಗಿದ್ದು, ಕಟುಂಬಸ್ಥರ ದುಃಖ ಮುಗಿಲು ಮುಟ್ಟಿದೆ. ಗ್ರಾಮದ ಅನ್ನಪೂರ್ಣ ಕಳಕಪ್ಪ ಮ್ಯಾಗೇರಿ (46) ಮತ್ತು ಇವರ ಮಗನಾದ ಶರಣಪ್ಪ ಕಳಕಪ್ಪ ಮ್ಯಾಗೇರಿ (19), ಪಕ್ಕದ ಮನೆಯ ಪ್ರಕಾಶ ಅಶೋಕ ಮಾಡಲಗೇರಿ (23) ಎಂಬ ಯುವಕ ಸೇರಿ ಒಟ್ಟು ಮೂರು ಜನರು ಸ್ಥಳದಲ್ಲಿಯೇ ಮೃತರಾಗಿದ್ದಾರೆ. ಕಳಕವ್ವ ಮ್ಯಾಗೇರಿ (35) ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮಲ್ಲಿಕಾರ್ಜುನ ಮ್ಯಾಗೇರಿ, ಆದೇಶ ಹಂಡಿ, ಶಿದ್ದಪ್ಪ ಹಂಡಿ ಪ್ರಾಣಾಪಯದಿಂದ ಪಾರಾಗಿದ್ದಾರೆ.
ನಮ್ಮ ಗ್ರಾಮದಲ್ಲಿ ಇಂತಹ ದುರ್ಘಟನೆ ಇದುವರೆಗೂ ನಡೆದಿಲ್ಲ. ಇಂತಹ ಆಘಾತಕಾರಿ ಸುದ್ದಿಗಳನ್ನು ನಾವೆಂದೂ ಕೇಳಿದ್ದಿಲ್ಲ ಎಂದು ಇಡೀ ಗ್ರಾಮವೇ ಕಣ್ಣೀರು ಹಾಕುತ್ತಿದೆ.
ಈ ದುರ್ಘಟನೆ ನನ್ನ ಮನಸ್ಸಿಗೆ ತೀವ್ರ ದುಃಖ ತರಿಸಿದೆ. ಗ್ರಾಮದ ಮೂವರು ಸಾವನ್ನಪ್ಪಿದ್ದು ದುಃಖಕರ ಸಂಗತಿಯಾಗಿದೆ. ಕುಟುಂಬಸ್ಥರ ದುಃಖದಲ್ಲಿ ನಾನು ಕೂಡ ಭಾಗಿಯಾಗಿದ್ದೇನೆ. ತಳ್ಳಿಹಾಳ ಗ್ರಾಮಕ್ಕೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬುವ ಕೆಲಸ ಮಾಡಲಿದ್ದೇನೆ.
– ಜಿ.ಎಸ್. ಪಾಟೀಲ.
ಶಾಸಕರು, ರೋಣ.