ಚಿಕ್ಕಮಗಳೂರು: ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ಮಾತನಾಡುವವರು ಲಿಂಗಾಯಿತರೇ ಅಲ್ಲ ಎಂದು ಬಿಜೆಪಿ ಮುಖಂಡ MP ರೇಣುಕಾಚಾರ್ಯ ಹೇಳಿದ್ದಾರೆ.
ಕಾಫಿನಾಡು ಚಿಕ್ಕಮಗಳೂರಿನಲ್ಲಿ ಇಂದು ಮಹಾಸಂಗಮ ಎಂಬ ಹೆಸರಿನಲ್ಲಿ ನಡೆದ ವೀರಶೈವ ಲಿಂಗಾಯಿತರ ಸಮಾವೇಶದ ಬಳಿಕ ಮಾತನಾಡಿದ ರೇಣುಕಾಚಾರ್ಯ, ಈ ಸಭೆಯ ಕುರಿತು ಒಂದು ವಾರದ ಹಿಂದಷ್ಟೇ ನಿರ್ಧಾರ ಕೈಗೊಳ್ಳಲಾಗಿತ್ತು. ಸಭೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಹಿರಿಯರು, ಕಿರಿಯರು ಮಹಿಳೆಯರು ಭಾಗವಹಿಸಿದ್ದು, ಇಂದಿನ ಸಭೆಯಲ್ಲಿ ಜಾತಿ ಗಣತಿಯನ್ನು ತಿರಸ್ಕಾರಗೊಳಿಸಬೇಕೆಂದು ನಿರ್ಣಯ ಕೈಗೊಂಡಿದ್ದೇವೆ. ವೀರಶೈವ ಲಿಂಗಾಯಿತರಲ್ಲಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದವರಿಗೆ ಉದ್ಯೋಗದಲ್ಲಿ ಮತ್ತು ಶಿಕ್ಷಣದಲ್ಲಿ ಮೀಸಲಾತಿಯ ಕುರಿತು ಚರ್ಚಿಸಿದ್ದೇವೆ ಎಂದರು.
ಯಡಿಯೂರಪ್ಪ ಮತ್ತು ವಿಜಯೇಂದ್ರ ಪ್ರಶ್ನಾತೀತ ನಾಯಕರು. ಅವರ ಬಗ್ಗೆ ಮಾತನಾಡುವವರಿಗೆ ಬುದ್ಧಿ ಭ್ರಮಣೆಯಾಗಿದೆ. ಅಲ್ಲದೇ ಇವರ ವಿರುದ್ಧ ಮಾತನಾಡುವವರು ನಿಜಕ್ಕೂ ಲಿಂಗಾಯಿತರೇ ಅಲ್ಲ, ಶೀಘ್ರದಲ್ಲೇ ದಾವಣಗೆರೆಯಲ್ಲಿ ಐತಿಹಾಸಿಕ ವೀರಶೈವ ಲಿಂಗಾಯಿತರ ಸಮಾವೇಶ ಮಾಡಿ ಯಡಿಯೂರಪ್ಪ ಅವರನ್ನು ಗೌರವಿಸುವ ಕೆಲಸವನ್ನು ಮಾಡುತ್ತೇವೆ ಎಂದು ರೇಣುಕಾಚಾರ್ಯ ತಿಳಿಸಿದ್ದಾರೆ.