ವಿಜಯಸಾಕ್ಷಿ ಸುದ್ದಿ, ನರಗುಂದ: ಕನ್ನಡ ಶಾಲೆಯಲ್ಲಿ ಕಲಿತವರಿಗೆ ಗಟ್ಟಿತನ ಬಹಳ. ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೂ ಸರ್ಕಾರಿ ಶಾಲೆಯಲ್ಲಿ ಕಲಿತವರೇ ಆಡಳಿತ ನಡೆಸುತ್ತಿದ್ದಾರೆ. ಚಿಕ್ಕಂದಿನಿಂದಲೂ ಸರ್ಕಾರಿ ಶಾಲೆಗೂ ನನಗೂ ಆತ್ಮೀಯ ಒಡನಾಟ ಇದೆ. ಮುಂದಿನ ದಿನಮಾನಗಳಲ್ಲಿ ಇನ್ನೂ ಹೆಚ್ಚಿನ ಸಹಾಯವನ್ನು ಶಾಲೆಗೆ ನೀಡುತ್ತೇನೆ ಎಂದು ಉದ್ಯಮಿ ಲಾಲಸಾಬ ಅರಗಂಜಿ ಹೇಳಿದರು.
ತಾಲೂಕಿನ ಶಿರೋಳ ಗ್ರಾಮದ ಸರ್ಕಾರಿ ಗಂಡು ಮಕ್ಕಳ ಶಾಲೆಗೆ ಲಾಲಸಾಬ ಅರಗಂಜಿ ಅಭಿಮಾನಿ ಬಳಗದಿಂದ ಟಿವಿ ಕೊಡುಗೆ ನೀಡಿದ ನಿಮಿತ್ತ ಶಾಲಾ ಶಿಕ್ಷಕ ಸಿಬ್ಬಂದಿ ವರ್ಗದವರು ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಾಲೆಯ ಪ್ರಧಾನ ಗುರುಗಳಾದ ಎಸ್.ಎಂ. ಶೀರಿ ಮಾತನಾಡಿ, ಲಾಲಸಾಬ ಅರಗಂಜಿ ಅಭಿಮಾನಿ ಬಳಗದಿಂದ ಉತ್ತಮ ಕಾರ್ಯಗಳಾಗುತ್ತಿವೆ. ತಂತ್ರಜ್ಞಾನದ ಕಾಲದಲ್ಲಿ ಶಾಲಾ ಮಕ್ಕಳಿಗೆ ಡಿಜಿಟಲ್ ಮೂಲಕ ಪಾಠ ಮಾಡುವುದರಿಂದ ಸಣ್ಣ ಸಮಯದಲ್ಲಿ ಹೆಚ್ಚಿನ ವಿಷಯಗಳನ್ನು ಮನವರಿಕೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಎಸ್.ಬಿ. ದಾಸರ ಗುರುಗಳು ಮಾತನಾಡಿ, ತಂದೆಯವರ ಮಾರ್ಗದಲ್ಲೇ ಸಾಗುತ್ತಿರುವ ಲಾಲಸಾಬ ಅರಗಂಜಿ ಬಡವರಿಗೆ, ರೈತಾಪಿ ವರ್ಗಕ್ಕೆ, ವಿದ್ಯಾರ್ಥಿಗಳಿಗೆ ಬಹಳಷ್ಟು ಪ್ರೋತ್ಸಾಹ, ಬೆಂಬಲ ನೀಡುತ್ತಾ ಸ್ಫೂರ್ತಿಯಾಗಿ ನಿಂತಿದ್ದಾರೆ ಎಂದರು
ಗಿರೀಶ ಗಾಣಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಶಿಕ್ಷಕರಾದ ಪ್ರವೀಣ ಕುಲಕರ್ಣಿ, ಎಸ್.ಪಿ. ಅಂಬೋರೆ, ಅಭಿಮಾನಿ ಬಳಗದ ಶರಣಪ್ಪ ಕಾಡಪ್ಪನವರ, ದ್ಯಾಮಣ್ಣ ತೆಗ್ಗಿ, ಪರಶುರಾಮ ರಾಥೋಡ್, ಅಶೋಕ ಸುಣಗಾರ, ರಾಜೇಸಾಬ ಚಳ್ಳಮರದ, ಶರಣಪ್ಪ ಸೂಡಿ ಮುಂತಾದವರು ಉಪಸ್ಥಿತರಿದ್ದರು.