HomeGadag Newsಸಾವಿರ ದಿನಗಳ ಸಮಾವೇಶ ಅಸಹ್ಯಕರ ಪದ್ಧತಿ: ಶಾಸಕ ಸಿ.ಸಿ. ಪಾಟೀಲ ವಾಗ್ದಾಳಿ

ಸಾವಿರ ದಿನಗಳ ಸಮಾವೇಶ ಅಸಹ್ಯಕರ ಪದ್ಧತಿ: ಶಾಸಕ ಸಿ.ಸಿ. ಪಾಟೀಲ ವಾಗ್ದಾಳಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದ ಕಾಂಗ್ರೆಸ್ ಸರ್ಕಾರವು ಸಾವಿರ ದಿನಗಳ ಆಡಳಿತ ಪೂರೈಸಿದ ಸಂಭ್ರಮದಲ್ಲಿ ನಡೆಸಿದ ಸಮಾವೇಶವು ಸಾಧನೆಗಳ ಸಮಾವೇಶವಲ್ಲ, ಬದಲಾಗಿ ಹಗರಣಗಳ ಸಮಾವೇಶ ಎಂದು ನರಗುಂದ ಶಾಸಕ ಸಿ.ಸಿ. ಪಾಟೀಲ ಆರೋಪಿಸಿದರು.

ಶನಿವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 178 ಕೋಟಿ ರೂಪಾಯಿಗಳನ್ನು 700ಕ್ಕೂ ಹೆಚ್ಚು ಖಾತೆಗಳಿಗೆ ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ವಿಧಾನಸೌಧದಲ್ಲಿ ಇದು 178 ಕೋಟಿ ಅಲ್ಲ, 90 ಕೋಟಿ ರೂಪಾಯಿ ಎಂದು ಒಪ್ಪಿಕೊಂಡಿದ್ದಾರೆ. ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿಗಳಿಗೆ ಇಷ್ಟೊಂದು ದೊಡ್ಡ ಮೊತ್ತದ ಹಣದ ವರ್ಗಾವಣೆ ಬಗ್ಗೆ ಅರಿವಿಲ್ಲ ಎಂದರೆ, ಜನರೇ ಇದನ್ನು ಯಾವ ರೀತಿಯ ಸಾಧನೆ ಎಂದು ತೀರ್ಮಾನಿಸಬೇಕು ಎಂದರು.

ರಾಜ್ಯ ಸರ್ಕಾರ ವಕ್ಫ್ ಮಂಡಳಿಗೆ 4 ಕೋಟಿ ರೂ, 9 ನಿಗಮಗಳಲ್ಲಿ 42 ಕೋಟಿ ರೂ. ದುರ್ಬಳಕೆಯಾಗಿದೆ. 700 ಕೋಟಿ ರೂ.ಗಳ ಅಬಕಾರಿ ಹಗರಣದಿಂದಾಗಿ ಇಬ್ಬರು ಸಚಿವರ ತಲೆದಂಡವಾಗಿದೆ. ಬೋವಿ ನಿಗಮದಲ್ಲಿ 60 ಕೋಟಿ ರೂ. ಹಗರಣ ನಡೆದಿದೆ. ಇಷ್ಟೆಲ್ಲಾ ಅವಾಂತರಗಳ ನಡುವೆ ಸರ್ಕಾರ ಯಾವುದಕ್ಕಾಗಿ ಸಂಭ್ರಮಿಸುತ್ತಿದೆ ಎನ್ನುವುದು ಅರ್ಥವಾಗುತ್ತಿಲ್ಲ ಎಂದು ಆರೋಪಿಸಿದರು.

ಆರ್‌ಸಿಬಿ ಸಂಭ್ರಮಾಚರಣೆಯ ವೇಳೆ 11 ಜನರ ಸಾವಿಗೆ ಸರ್ಕಾರದ ಬೇಜವಾಬ್ದಾರಿಯೇ ಕಾರಣ. ರಾಜ್ಯದ ಮುಖ್ಯ ಕಾರ್ಯದರ್ಶಿಗಳು, ಪೊಲೀಸರು ಬಂದೋಬಸ್ತ್ ಮಾಡಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದರೂ ಸರ್ಕಾರ ಹಠಕ್ಕೆ ಬಿದ್ದವರಂತೆ ಕಾರ್ಯಕ್ರಮಕ್ಕೆ ಅವಕಾಶ ನೀಡಿತು ಎಂದು ಕಿಡಿಕಾರಿದರು.

ಸಿದ್ದರಾಮಯ್ಯನವರು ಹಿಂದೆ ಎಸ್‌ಸಿಪಿ ಮತ್ತು ಟಿಎಸ್‌ಪಿ ಕಾಯ್ದೆಯನ್ನು ಜಾರಿಗೆ ತಂದಿದ್ದರು. ಅದನ್ನು ನಾನು ಸ್ವಾಗತಿಸುತ್ತೇನೆ. ಆದರೆ ಇಂದು ಅದೇ ಯೋಜನೆಯ ಹಣವನ್ನು ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ವಸತಿ ಯೋಜನೆಯಲ್ಲಿ ಅಲ್ಪಸಂಖ್ಯಾತರಿಗೆ ಶೇ. 15ರಷ್ಟು ಮೀಸಲಾತಿ ನೀಡಿರುವುದು ಹಾಗೂ ನರೇಗಾ ಯೋಜನೆಯ ಬಗ್ಗೆ ಅಪಪ್ರಚಾರ ಮಾಡುತ್ತಿರುವುದು ಸರ್ಕಾರದ ದ್ವಂದ್ವ ನೀತಿಯನ್ನು ತೋರಿಸುತ್ತದೆ ಎಂದು ದೂರಿದರು.

ಹಾವೇರಿಯಲ್ಲಿ ನಡೆದ ಸರ್ಕಾರದ ಸಾಧನಾ ಸಮಾವೇಶದಲ್ಲಿ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಅಕ್ಕಪಕ್ಕದಲ್ಲಿ ಕುಳಿತಿದ್ದರೂ ಪರಸ್ಪರ ಮಾತನಾಡಲಿಲ್ಲ. ಸಿಎಂ ಭಾಷಣ ಶುರುವಾಗುತ್ತಿದ್ದಂತೆ ಡಿ.ಕೆ. ಶಿವಕುಮಾರ್ ಅವರು ವೇದಿಕೆಯಿಂದ ಹೊರನಡೆದರು ಎನ್ನುವುದನ್ನು ಮಾಧ್ಯಮವೊಂದರ ವರದಿಯಿಂದ ಗೊತ್ತಾಗಿದೆ. ಇದು ಅವರ ನಡುವಿನ ಅಸಮಾಧಾನಕ್ಕೆ ಸಾಕ್ಷಿ. ಈ ಸರ್ಕಾರಕ್ಕೆ ಸಾವಿರ ದಿನಗಳ ಕ್ವಾಂಟಿಟಿಗಿಂತ ಆಡಳಿತದ ಕ್ವಾಲಿಟಿ ಮುಖ್ಯ ಎಂಬುದೇ ಮರೆತುಹೋಗಿದೆ. ಸಾವಿರ ದಿನಗಳ ಈ ಸಮಾವೇಶ ಅಸಹ್ಯಕರ ಪದ್ಧತಿ ಎಂದು ಲೇವಡಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಬಿಜೆಪಿ ಮುಖಂಡರಾದ ಎಂ.ಎಸ್. ಕರಿಗೌಡ್ರ, ಎಂ.ಎನ್. ಹಿರೇಮಠ, ಜಗನ್ನಾಥಸಾ ಭಾಂಡಗೆ ಇತರರು ಉಪಸ್ಥಿತರಿದ್ದರು.

ಬಾಕ್ಸ್
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ನಾಸೀರ್ ಹುಸೇನ್ ಮತ್ತು ಆತನ ಬೆಂಬಲಿಗರು ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದಾಗ ಯಾವುದೇ ಕಠಿಣ ಕ್ರಮ ಜರುಗಿಸಲಿಲ್ಲ. ಗೃಹ ಸಚಿವರು ಸಂಪೂರ್ಣ ವೈಫಲ್ಯ ಕಂಡಿದ್ದಾರೆ. ಸಿಎಂ ತವರು ಜಿಲ್ಲೆಯಲ್ಲಿ ಡ್ರಗ್ಸ್ ಫ್ಯಾಕ್ಟರಿಯನ್ನು ಮಹಾರಾಷ್ಟ್ರ ಪೊಲೀಸರು ಪತ್ತೆ ಹಚ್ಚುವಂತಾಗಿದೆ. ನಮ್ಮ ಪೊಲೀಸರಿಗೆ ಸಾಮರ್ಥ್ಯ ಇಲ್ಲ ಎಂದಲ್ಲ, ಸರ್ಕಾರ ಅವರ ಕೈಗಳನ್ನು ಕಟ್ಟಿ ಹಾಕಿದೆ. ಆ ಮೂಲಕ ದೇಶದಲ್ಲಿ ರಾಜ್ಯದ ಪೊಲೀಸರ ಮಾನ ಹರಾಜು ಹಾಕುವ ಕೆಲಸ ಮಾಡುತ್ತಿದೆ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!