ಬಾಲಿವುಡ್ನಲ್ಲಿ ಮತ್ತೊಮ್ಮೆ ಆತಂಕದ ವಾತಾವರಣ ನಿರ್ಮಾಣವಾಗಿದೆ. ನಿರ್ದೇಶಕ ರೋಹಿತ್ ಶೆಟ್ಟಿ ಮನೆ ಮೇಲೆ ಗುಂಡಿನ ದಾಳಿ ನಡೆದ ಕೆಲವೇ ದಿನಗಳಲ್ಲಿ ನಟ ರಣವೀರ್ ಸಿಂಗ್ ಅವರಿಗೆ ವಾಟ್ಸಪ್ ಮೂಲಕ ಬೆದರಿಕೆ ಸಂದೇಶ ಕಳುಹಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಘಟನೆಯ ನಂತರ ಮುಂಬೈ ಪೊಲೀಸರು ದೀಪಿಕಾ ಪಡುಕೋಣೆ-ರಣವೀರ್ ಸಿಂಗ್ ನಿವಾಸದ ಬಳಿ ಕಠಿಣ ಭದ್ರತೆ ಒದಗಿಸಿದ್ದಾರೆ.
ಸೂತ್ರಗಳ ಪ್ರಕಾರ, ಕಿಡಿಗೇಡಿಗಳು ವಾಟ್ಸಪ್ ವಾಯ್ಸ್ ನೋಟ್ ಮೂಲಕ ಕೋಟ್ಯಂತರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟು ಬೆದರಿಕೆ ಹಾಕಿದ್ದಾರೆ. ಈ ಹಿಂದೆ ಹಲವು ಸೆಲೆಬ್ರಿಟಿಗಳಿಗೆ ಬೆದರಿಕೆ ಹಾಕಿದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಈ ಪ್ರಕರಣದಲ್ಲೂ ಭಾಗಿಯಾಗಿರಬಹುದು ಎಂಬ ಅನುಮಾನ ಪೊಲೀಸರಲ್ಲಿ ಮೂಡಿದೆ.
ಬೆದರಿಕೆ ಬಂದ ಕೂಡಲೇ ರಣವೀರ್ ಸಿಂಗ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ತಾಂತ್ರಿಕ ತಂಡಗಳು ವಾಯ್ಸ್ ನೋಟ್ ಮೂಲ ಪತ್ತೆ ಮಾಡಲು ಮುಂದಾಗಿವೆ.
ಭದ್ರತಾ ಕ್ರಮವಾಗಿ ನಟರ ನಿವಾಸದ ಸುತ್ತ ಶಸ್ತ್ರಾಸ್ತ್ರ ಹಿಡಿದ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದ್ದು, ದಂಪತಿಗಳೂ ಖಾಸಗಿ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಅಪಾರ್ಟ್ಮೆಂಟ್ ನಿವಾಸಿಗಳು ಈ ಬೆಳವಣಿಗೆಯಿಂದ ಆತಂಕಗೊಂಡಿದ್ದು, ಪೊಲೀಸರ ಬಳಿ ಭದ್ರತಾ ಚಿಂತೆಯನ್ನು ವ್ಯಕ್ತಪಡಿಸಿದ್ದಾರೆ.
‘ಧುರಂಧರ್’ ಚಿತ್ರದ ಭಾರೀ ಯಶಸ್ಸಿನ ನಂತರ ರಣವೀರ್ ಸಿಂಗ್ ಅವರ ಮಾರುಕಟ್ಟೆ ಮೌಲ್ಯ ಮತ್ತು ಸಂಭಾವನೆ ಏರಿಕೆಯಾಗಿದೆ. ಇದನ್ನೇ ಗುರಿಯಾಗಿಸಿಕೊಂಡು ದುಷ್ಕರ್ಮಿಗಳು ಹಣದ ಬೇಡಿಕೆ ಇಟ್ಟಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಪ್ರಕರಣದ ಕುರಿತು ಮುಂಬೈ ಪೊಲೀಸರು ಯಾವುದೇ ಅಧಿಕೃತ ಮಾಹಿತಿ ಬಹಿರಂಗಪಡಿಸದಿದ್ದರೂ, ಬಾಲಿವುಡ್ ಸೆಲೆಬ್ರಿಟಿಗಳ ಭದ್ರತೆ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.



