ರಾಮನಗರ: ಜಿಲ್ಲೆಯ ಕನಕಪುರ ತಾಲೂಕಿನ ಆಲನಾಥ ಗ್ರಾಮದಲ್ಲಿ ನಡೆದ ನಾಡಬಾಂಬ್ ಸ್ಫೋಟ ಪ್ರಕರಣ ಗ್ರಾಮಸ್ಥರ ಮನಸ್ಸನ್ನು ಕಲುಷಿತಗೊಳಿಸಿತ್ತು. ಕಾಡುಹಂದಿ ಬೇಟೆಗಾಗಿ ಇಟ್ಟಿದ್ದ ನಾಡಬಾಂಬ್‌ಗೆ ಬಲಿ ಆದ ಹಸುವಿನ ನೋವಿನ ಕಥೆಗೆ ಇದೀಗ ನ್ಯಾಯ ದೊರಕತೊಡಗಿದೆ.
ಜನವರಿ 3ರಂದು ರೈತ ಶಿವನೇಗೌಡ ತಮ್ಮ ಹಸುವನ್ನು ಮೇಯಲು ಬಿಟ್ಟಾಗ, ಹಸುವಿನ ಬಾಯಿಗೆ ನಾಡಬಾಂಬ್ ಸಿಲುಕಿ ಭೀಕರ ಸ್ಫೋಟ ಸಂಭವಿಸಿತ್ತು. ಬಾಯಿ ಛಿದ್ರಗೊಂಡ ಹಸು ತೀವ್ರ ನೋವಿನಲ್ಲಿ ನರಳಾಡುತ್ತಾ ಎರಡು ದಿನಗಳ ಬಳಿಕ ಸಾವನ್ನಪ್ಪಿತ್ತು. ಈ ಘಟನೆ ಗ್ರಾಮದಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು.
ಘಟನೆಗೆ ಸಂಬಂಧಿಸಿ ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ನಡೆಸಿ, ಕಾಡು ಪ್ರಾಣಿಗಳ ಬೇಟೆಗೆ ನಾಡಬಾಂಬ್ ಇಟ್ಟಿದ್ದ ಮೂವರು ಆರೋಪಿಗಳಾದ ಕೃಷ್ಣಮೂರ್ತಿ (45), ಶಿವಕುಮಾರ್ (23) ಮತ್ತು ಶಿವನಪ್ಪ (46) ಅವರನ್ನು ಬಂಧಿಸಿದ್ದಾರೆ. ಜೊತೆಗೆ, ಇನ್ನೆರಡು ಜೀವಂತ ನಾಡಬಾಂಬ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಕಾರ್ಯಾಚರಣೆ ಮೂಲಕ ಅಕ್ರಮ ಬೇಟೆ ಮತ್ತು ಸ್ಫೋಟಕ ಬಳಕೆಗೆ ಪೊಲೀಸರ ಕಠಿಣ ಸಂದೇಶ ನೀಡಿದಂತಾಗಿದೆ.



