ಹುಬ್ಬಳ್ಳಿ:- ಯುವಕನನ್ನ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ ಮೂವರು ಆರೋಪಿಗಳ ಮೇಲೆ ಪೊಲೀಸರು ಗುಂಡು ಹಾಕಿದ ಘಟನೆ ಇಲ್ಲಿನ ಲಿಂಗರಾಜನಗರದ ಗೋಲ್ಡನ್ ಹೈಟ್ಸ್ ಬಾರ್‌ನ ಪಾರ್ಕಿಂಗ್‌ನಲ್ಲಿ ಜರುಗಿದೆ.
ಗುಂಡೇಟು ತಿಂದ ಆರೋಪಿಗಳನ್ನು ಆನಂದ ನಗರ ನಿವಾಸಿಗಳಾದ ಅಭಿಷೇಕ ಶಿರೂರ, ವಿನೋದ್ ಅಂಬಿಗೇರ, ಹಾಗೂ ಯಲ್ಲಪ್ಪ ಕೋಟಿ ಎಂದು ಗುರುತಿಸಲಾಗಿದೆ.
ಆರೋಪಿಗಳು, ನಗರದ ಲಿಂಗರಾಜ ನಗರದಲ್ಲಿರುವ ಗೋಲ್ಡನ್ ಹೈಟ್ಸ್ ಬಾರ್ ಪಾರ್ಕಿಂಗ್ ಜಾಗದಲ್ಲಿ ಆಕಾಶ ವಾಲ್ಮೀಕಿ ಎಂಬ ಯುವಕನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದರು. ತಡರಾತ್ರಿ ನಡೆದ ಕೊಲೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಈ ಮೂವರು ಆರೋಪಿಗಳನ್ನು ಬಂಧಿಸಲು ತೆರಳಿದಾಗ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಆರೋಪಿಗಳ ಇಬ್ಬರ ಎರಡೂ ಕಾಲಿಗೆ ಮತ್ತು ಓರ್ವನ ಒಂದು ಕಾಲಿಗೆ ಗುಂಡು ಹಾರಿಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಘಟನೆಯಲ್ಲಿ ನಾಲ್ವರು ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿದ್ದು, ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಹಿತಿ ತಿಳಿದು ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಭೇಟಿ ನೀಡಿ ಗಾಯಗೊಂಡಿರುವ ಪೊಲೀಸರ ಆರೋಗ್ಯ ವಿಚಾರಿಸಿದ್ದಾರೆ. ನಂತರ ಗುಂಡೇಟು ತಿಂದ ಆರೋಪಿಗಳನ್ನೂ ಪರಿಶೀಲಿಸಿದ್ದಾರೆ.