ಮೂರು ಸೋಲು: ಮಗ ನಿಖಿಲ್ ಬಗ್ಗೆ ಅನಿತಾ ಕುಮಾರಸ್ವಾಮಿ ಭಾವನಾತ್ಮಕ ಪೋಸ್ಟ್!

0
Spread the love

ಬೆಂಗಳೂರು:- ಇತ್ತೀಚೆಗೆ ನಡೆದ ಚನ್ನಪಟ್ಟಣ ಉಪಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಹೀನಾಯ ಸೋಲು ಕಂಡಿದ್ದು, ಜೆಡಿಎಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳಲ್ಲಿ ಸಹಜವಾಗಿ ಬೇಸರ ಮೂಡಿಸಿದೆ.

Advertisement

ಅಷ್ಟೇ ಅಲ್ಲದೇ ನಿಖಿಲ್ ಗೆ ರಾಜಕೀಯದಲ್ಲಿ ಏಳಿಗೆ ಸಿಗುತ್ತನೇ ಇಲ್ಲವಲ್ಲ ಎಂಬ ನೋವು ಸಹಜವಾಗಿ ಅವರ ಕುಟುಂಬದವರಲ್ಲಿ ಕಾಡಿದೆ. ಇದೀಗ ನಿಖಿಲ್ ಹ್ಯಾಟ್ರಿಕ್​ ಸೋಲಿನ ಬಗ್ಗೆ ಅನಿತಾ ಕುಮಾರಸ್ವಾಮಿ ಭಾವನಾತ್ಮಕ ಪೋಸ್ಟ್ ಹಾಕಿದ್ದಾರೆ.

ನನ್ನ ಮಗ ಮೂರನೇ ಸಲ ಸೋತಿದ್ದಾನೆ. ಅವನು ಚುನಾವಣೆಯಲ್ಲಿ ಮಾತ್ರ ಸೋತಿದ್ದಾನೆಯೇ ಹೊರತು ಮನುಷ್ಯನಾಗಿ ಸೋತಿಲ್ಲ. ಅವನ ಮಾನವೀಯತೆ, ಸಹೃದಯತೆ ಸೋತಿಲ್ಲ ಎಂದಿದ್ದಾರೆ. ಈ ಮೂಲಕ ನಿಖಿಲ್​ ಸೋಲು ಹೀಯಾಳಿಸುವವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

ನನ್ನ ಪುತ್ರ ನಿಖಿಲ್ ಕುಮಾರಸ್ವಾಮಿ, ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಪರಾಜಯ ಹೊಂದಿದ್ದಾನೆ, ಒಪ್ಪುತ್ತೇನೆ. ಚುನಾವಣೆ ವ್ಯವಸ್ಥೆಯಲ್ಲಿ ಸೋಲು ಗೆಲುವು ಇದ್ದೇ ಇರುತ್ತದೆ ಹಾಗೂ ಒಬ್ಬರು ಗೆಲ್ಲಬೇಕಾದರೆ ಇನ್ನೊಬ್ಬರು ಸೋಲಲೇಬೇಕಾಗುತ್ತದೆ. ಆದರೆ ಸೋಲಿಗೆ ಅನೇಕ ಕಾರಣಗಳಿರುತ್ತವೆ. ಹಾಗೆಂದು ನಿಖಿಲ್ ಸೋಲಿನ ಕಾರಣಗಳ ಬಗ್ಗೆ ಚರ್ಚಿಸುವುದು ನನ್ನ ಉದ್ದೇಶವಲ್ಲ ಎಂದು ಬರೆದುಕೊಂಡಿದ್ದಾರೆ.

ರಾಜಕಾರಣದಲ್ಲಿ ನನಗಾಗಲಿ, ನನ್ನ ಪತಿಗಾಗಲಿ ಅಥವಾ ನನ್ನ ಪೂಜ್ಯ ಮಾವನವರಿಗೇ ಆಗಲಿ ಗೆಲುವು, ಸೋಲು ಹೊಸದೇನಲ್ಲ. ಎರಡನ್ನೂ ಸಮಚಿತ್ತದಿಂದ ಸ್ವೀಕರಿಸಿದ್ದೇವೆ. ಗೆದ್ದಾಗ ಬೀಗಿಲ್ಲ, ಸೋತಾಗ ಕುಗ್ಗಿಲ್ಲ. ಸೋತ ಹತಾಶೆಯಲ್ಲಿ ಅನ್ಯರನ್ನು ಹೀಗಳೆದಿಲ್ಲ. ನನ್ನ ಮಗನಿಗೂ ಇದೇ ಅನ್ವಯ ಆಗುತ್ತದೆ. ನನ್ನ ಮಗನ ಬಗ್ಗೆ ರಾಜ್ಯದ ಜನತೆಗೆ ಹೆಚ್ಚೇನೂ ಹೇಳುವ ಅಗತ್ಯವಿಲ್ಲ. ಅವನು ಒಳ್ಳೆಯ ಮಗ, ಒಳ್ಳೆಯ ಪತಿ, ಒಳ್ಳೆಯ ತಂದೆ. ರಾಜಕಾರಣಕ್ಕೆ ಬರುವ ಮುನ್ನ ಒಳ್ಳೆಯ ನಾಯಕ ನಟ. ಅವನಂಥ ಒಳ್ಳೆಯ ಮಗನನ್ನು ಪಡೆದಿದ್ದಕ್ಕಾಗಿ ನಾನೂ ನನ್ನ ಪತಿ ಹೆಮ್ಮೆಪಡುತ್ತೇವೆ ಎಂದಿದ್ದಾರೆ.

ತಾಯಿಯಾಗಿ ಅವನ ಯಶಸ್ಸನ್ನು ಸಂಭ್ರಮಿಸುತ್ತೇನೆ. ಅವನಿಗೆ ಕಷ್ಟ ಎದುರಾದಾಗ ಕಣ್ಣೀರಿಟ್ಟಿದ್ದೇನೆ. ನನ್ನ ಕರುಳಬಳ್ಳಿಯ ಮೇಲೆ ನನಗಷ್ಟು ಮಮಕಾರ ಇರುತ್ತದಲ್ಲವೇ? ನನ್ನಂತಹ ಎಲ್ಲಾ ತಾಯಂದಿರಿಗೂ ನನ್ನ ಭಾವನೆಗಳು ಅರ್ಥವಾಗುತ್ತವೆ ಎನ್ನುವ ವಿಶ್ವಾಸ ನನ್ನದು. ನನ್ನ ಮಗ 3ನೇ ಸಲ ಸೋತಿದ್ದಾನೆ. ಅವನು ಚುನಾವಣೆಯಲ್ಲಿ ಮಾತ್ರ ಸೋತಿದ್ದಾನೆಯೇ ಹೊರತು ಮನುಷ್ಯನಾಗಿ ಸೋತಿಲ್ಲ, ಅವನ ಮಾನವೀಯತೆ, ಸಹೃದಯತೆ ಸೋತಿಲ್ಲ. ಅವನ ಮನಸ್ಸು, ಹೃದಯ ವೈಶಾಲ್ಯತೆ ಏನೆಂದು ತಾಯಿಯಾಗಿ ನನಗೆ ಚನ್ನಾಗಿ ಗೊತ್ತು ಎಂದು ಭಾವನೆಗಳನ್ನು ಹಂಚಿಕೊಂಡಿದ್ದಾರೆ.


Spread the love

LEAVE A REPLY

Please enter your comment!
Please enter your name here