ಆನೇಕಲ್:- ಬೆಂಗಳೂರು ಹೊರವಲಯದ ಸರ್ಜಾಪುರ ಪೊಲೀಸರು ತನಿಖೆ ಚುರುಕುಗೊಳಿಸಿ ಇತ್ತೀಚೆಗೆ ಹೆಣ್ಣಿನ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಆದ ಮೂರು ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸಿದ್ದಾರೆ.
ಸೋನು ಮತ್ತು ಸುಧೀರ್ ಬಂಧಿತರು. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸರ್ಜಾಪುರ ಬಾಗಲೂರು ರಸ್ತೆಯ ಪೋರ್ ವಾಲ್ಸ್ ಅವೆನ್ಯೂ ಹೆಸರಿನ ನಿರ್ಮಾಣ ಹಂತದ ಅಪಾರ್ಟ್ಮೆಂಟ್ನಲ್ಲಿ ಮೂವರ ಬರ್ಬರ ಹತ್ಯೆಯಾಗಿತ್ತು. ಘಟನೆಯಲ್ಲಿ ಬಿಹಾರ ಮೂಲದ ಅನ್ಶು (20), ರಾಧೆಶ್ಯಾಮ್ (20), ದೀಪು (18) ಮೃತಪಟ್ಟಿದ್ದರು.
ಹೋಳಿ ಹಬ್ಬದ ಅಂಗವಾಗಿ ಬಿಹಾರ ಮೂಲದ ಕಟ್ಟಡ ಕಾರ್ಮಿಕರಿಗೆ ರಜೆ ಸಿಕ್ಕ ಖುಷಿಯಲ್ಲಿ ದೊಡ್ಡ ಕನ್ನಲ್ಲಿ ಬಳಿ ಅಪಾರ್ಟ್ಮೆಂಟ್ನಲ್ಲಿ ಕಟ್ಟಡ ಕಾರ್ಮಿಕರಾಗಿ ದುಡಿಯುತ್ತಿದ್ದ ತಮ್ಮದೇ ಊರಿನವರಾದ ಆರೋಪಿ ಸೋನು ಮತ್ತು ಸುಧೀರ್ನ ಎಣ್ಣೆ ಪಾರ್ಟಿಗೆ ಕರೆದಿದ್ದರು. ಪಾರ್ಟಿ ಎಂಜಾಯ್ ಮಾಡಲು ಆರೇಳು ಜನರು ಸರ್ಜಾಪುರದ ನಿರ್ಮಾಣ ಹಂತದ ಕಟ್ಟಡದಲ್ಲಿ ಸೇರಿದ್ದರು. ಎಣ್ಣೆ ಪಾರ್ಟಿ ಮಾಡುವಾಗ ನಡೆದ ಗಲಾಟೆ ಮೂವರ ಕೊಲೆಯಲ್ಲಿ ಅಂತ್ಯವಾಗಿತ್ತು. ಹೋಳಿ ಹಬ್ಬದ ದಿನ ರಕ್ತದೋಕುಳಿ ಹರಿಸಿ ಪರಾರಿಯಾಗಿದ್ದ ಆರೋಪಿಗಳಾದ ಸೋನು ಮತ್ತು ಸುಧೀರ್ನ ಬಂಧಿಸುವಲ್ಲಿ ಸರ್ಜಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.



