ಚೈನ್ನೈ:- ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನ ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿರುವ ಆಘಾತಕಾರಿ ಘಟನೆ ಕೊಯಮತ್ತೂರು ವಿಮಾನ ನಿಲ್ದಾಣದ ಬಳಿ ಜರುಗಿದೆ.
ಘಟನೆ ಸಂಬಂಧ ಮೂವರು ಕಾಮುಕರನ್ನು ಪೋಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧನ ಕಾರ್ಯಾಚರಣೆ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಮೂವರ ಕಾಲಿಗೆ ಗುಂಡು ಹಾರಿಸಲಾಗಿದೆ. ಬಳಿಕ ಆರೋಪಿಗಳನ್ನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಘಟನೆ ವಿವರ:-
20 ವರ್ಷದ ಸ್ನಾತಕೋತ್ತರ ವಿದ್ಯಾರ್ಥಿನಿಯನ್ನ ಭಾನುವಾರ ರಾತ್ರಿ ಕೊಯಮತ್ತೂರು ಏರ್‌ಪೋರ್ಟ್ ಹಿಂದಿರುವ ಬೃಂದಾವನ ನಗರದ ಬಳಿ ಅಪಹರಿಸಿ ಸಾಮೂಹಿಕವಾಗಿ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ನಡೆದಿತ್ತು.
ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ತನ್ನ ಸ್ನೇಹಿತನೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ದುಷ್ಕರ್ಮಿಗಳು ಅವರ ವಾಹನವನ್ನು ಅಡ್ಡಗಟ್ಟಿ, ಯುವಕನ ಮೇಲೆ ದಾಳಿ ನಡೆಸಿ ವಿದ್ಯಾರ್ಥಿನಿಯನ್ನ ಅಪಹರಿಸಿದ್ದರು. ಬಳಿಕ ವಿದ್ಯಾರ್ಥಿನಿಯನ್ನು ಬೇರೆ ಸ್ಥಳಕ್ಕೆ ಕರೆದುಕೊಂಡು ಹೋಗಿ ರಾತ್ರಿ 10.30ರ ಸುಮಾರಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ಸೋಮವಾರ ಬೆಳಗ್ಗಿನ ಜಾವ ಸಂತ್ರಸ್ತೆಯನ್ನ ನಿರ್ಜನ ಪ್ರದೇಶದಲ್ಲಿ ಬಿಟ್ಟುಹೋಗಿದ್ದರು. ಬಳಿಕ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದ ಆಕೆಯನ್ನ ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದರು.
ಸಂತ್ರಸ್ತೆ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲೈಂಗಿಕ ದೌರ್ಜನ್ಯ ದೃಢಪಟ್ಟಿದೆ, ಆಕೆ ಸುರಕ್ಷಿತಳಾಗಿದ್ದಾಳೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.


