ಯಾದಗಿರಿ: ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಪ್ಪನಟಗಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಮೂವರು ಮೃತಪಟ್ಟಿರುವ ಘಟನೆ ನಡೆದಿದೆ. 10 ದಿನಗಳ ಹಿಂದೆ ವಾಂತಿ, ಭೇದಿ ಮತ್ತು ಜ್ವರದಿಂದ ಬಳಲಿ ಅನೇಕರು ಆಸ್ಪತ್ರೆ ಸೇರಿದ್ದರು. ಆದರೆ ಇಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದೇವಿಕೆಮ್ಮ ಹೊಟ್ಟಿ (48), ವೆಂಕಮ್ಮ (60), ರಾಮಣ್ಣ ಪೂಜಾರಿ (50) ಎಂಬವರು ಮೃತಪಟ್ಟಿದ್ದಾರೆ.
ಆರು ಜನರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲವರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಇನ್ನೂ 20 ಜನ ಅಸ್ವಸ್ಥ ಸ್ಥಿತಿಯಲ್ಲಿದ್ದಾರೆ.
ತಿಪ್ಪನಟಗಿ ಗ್ರಾಮಕ್ಕೆ ಸುರಪುರ ತಾಲೂಕು ಆರೋಗ್ಯ ಅಧಿಕಾರಿ ರಾಜಾ ವೆಂಕಟಪ್ಪ ನಾಯಕ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಾಂತಿ ಭೇದಿ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ನೀಡುವಂತೆ ಜಿಲ್ಲಾ ಆರೋಗ್ಯ ಅಧಿಕಾರಿ ಮಹೇಶ ಬಿರಾದಾರ ಸೂಚನೆ ಆದೇಶಿಸಿದ್ದಾರೆ. ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.