ಟಾಲಿವುಡ್ ನಟ ಅಲ್ಲು ಅರ್ಜುನ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ 2 ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಕಂಡಿದೆ. ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದ್ದು, ಮುಗಿಬಿದ್ದು ಸಿನಿಮಾ ನೋಡ್ತಿದ್ದಾರೆ. ಇದರ ನಡುವೆ ಅಹಿತಕರ ಘಟನೆಗಳು ನಡೆದಿದೆ.
ಅಭಿಮಾನಿಗಳು ಎಲ್ಲೆಡೆ ಮುಗಿಬಿದ್ದು ಸಿನಿಮಾ ವೀಕ್ಷಿಸುತ್ತಿದ್ದಾರೆ. ಹೈದ್ರಾಬಾದ್ನ ಸಂಧ್ಯಾ ಥಿಯೇಟರ್ ಬಳಿ ಪ್ರೀಮಿಯರ್ ಶೋ ವೇಳೆ ದುರಂತ ಸಂಭವಿಸಿದೆ. ಫಸ್ಟ್ ಡೇ ಫಸ್ಟ್ ಶೋ ನೋಡುವ ದಾಂವಂತದಲ್ಲಿ ಮೂವರು ಸಾವನ್ನಪ್ಪಿದ್ದಾರೆ.
ಪ್ರೀಮಿಯರ್ ಶೋ ನೋಡಲು ಅಲ್ಲು ಅರ್ಜುನ್ ಬರ್ತಾರೆ ಎಂಬ ಸುದ್ದಿ ತಿಳಿದು ಅಪಾರ ಪ್ರಮಾಣದ ಅಭಿಮಾನಿಗಳು ಸೇರಿದ್ದರು. ಥಿಯೇಟರ್ ಒಳಗೆ ನುಗ್ಗಲು ಯತ್ನಿಸಿದಾಗ ಜನರ ನಿಯಂತ್ರಣಕ್ಕಾಗಿ ಪೊಲೀಸರು ಲಾಠಿ ಬೀಸಿದ್ದಾರೆ. ಜನ ಭಯಭೀತರಾಗಿ ಓಡಿದ್ದರಿಂದ ಕಾಲ್ತುಳಿತ ಸಂಭವಿಸಿದೆ. ಒಂದೇ ಕುಟುಂಬದ ನಾಲ್ವರು ಸಿನಿಮಾ ನೋಡಲು ಬಂದಿದ್ದು ಈ ವೇಳೆ ತಾಯಿ ಹಾಗೂ ಇಬ್ಬರು ಮಕ್ಕಳು ಉಸಿರುಕಟ್ಟಿ ಸಾವನ್ನಪ್ಪಿದ್ದಾರೆ. ಆಸ್ಪತ್ರೆಗೆ ಸೇರಿಸಿದ್ರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಮತ್ತೊಂದೆಡೆ ಚಿಕ್ಕಬಳ್ಳಾಪುರದಲ್ಲಿ ಪುಷ್ಪ-2 ಸಿನಿಮಾ ನೋಡಲು ತೆರಳುತ್ತಿದ್ದ ಯುವಕ ರೈಲಿಗೆ ಸಿಲುಕಿ ದಾರುಣ ಸಾವನ್ನಪ್ಪಿದ್ದಾನೆ. ದೊಡ್ಡಬಳ್ಳಾಪುರ ಹೊರವಲಯದ ಬಾಶೆಟ್ಟಿಹಳ್ಳಿ ರೈಲ್ವೇ ಸೇತುವೆ ಬಳಿ ದುರಂತ ನಡೆದಿದೆ. ಮೃತ ಯುವಕನನ್ನು ಆಂಧ್ರಪ್ರದೇಶದ ಪಾಲಕೊಂಡ ನಿವಾಸಿ 19 ವರ್ಷದ ಪ್ರವೀಣ್ ಅಂತ ಗುರುತಿಸಲಾಗಿದೆ. ರೈಲ್ವೇ ಹಳಿ ದಾಟುವ ವೇಳೆ ದುರ್ಘಟನೆ ಸಂಭವಿಸಿದೆ. ಮಹಿಳೆ ಸಾವಿಗೆ ನಟಿ ರಶ್ಮಿಕಾ ಮಂದಣ್ಣ ಹಾಗೂ ನಿರ್ಮಾಣ ಸಂಸ್ಥೆ ವಿಷಾದ ವ್ಯಕ್ತಪಡಿಸಿದೆ.