ದಾವಣಗೆರೆ:- ಜಾತಿ ಗಣತಿ ಸರ್ವೆ ಕಾರ್ಯಕ್ಕೆ ಗೈರಾಗಿದ್ದ ಇಬ್ಬರು ಶಿಕ್ಷಕರು ಸೇರಿ ಮೂವರನ್ನು ಅಮಾನತು ಮಾಡಿ ದಾವಣಗೆರೆ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಆದೇಶ ಹೊರಡಿಸಿದ್ದಾರೆ.
ಎಸ್, ಜಾತಿ ಗಣತಿಗೆ ಗೈರಾಗಿದ್ದ ಮೂವರು ಸಿಬ್ಬಂದಿಗಳನ್ನು 1957ರ ನಿಯಮ 10(1)(d) ಅನ್ವಯ ಸೇವೆಯಿಂದ ಅಮಾನತುಗೊಳಿಸಿ ಡಿಸಿ ಆದೇಶ ಹೊರಡಿಸಿದ್ದಾರೆ. ಸಮೀಕ್ಷಾ ಕಾರ್ಯಕ್ಕೆ ನಿರಾಸಕ್ತಿ ತೋರಿದ ಪರಿಣಾಮ ಇಬ್ಬರು ಶಿಕ್ಷಕರು, ಹಾಗೂ ಓರ್ವ ಹಾಸ್ಟೆಲ್ ವಾರ್ಡನ್ ಅಮಾನತು ಮಾಡಲಾಗಿದೆ. ಜಾಮಾಪುರ ಪ್ರಾಥಮಿಕ ಶಾಲೆ ಶಿಕ್ಷಕ ಡಿ.ಕೆ.ಮಂಜುನಾಥ್, ನಾಗನೂರಿನ ಸರ್ಕಾರಿ ಪ್ರೌಢ ಶಾಲೆ ಶಿಕ್ಷಕ ಹೆಚ್.ಬಸವರಾಜಪ್ಪ ಹಾಗೂ ಮಾಯಾಕೊಂಡದ ಹಾಸ್ಟೆಲ್ ವಾರ್ಡನ್ ದುರ್ಗಪ್ಪ ಕೆ.ಆರ್ ಸಸ್ಪೆಂಡ್ ಆದವರು ಎನ್ನಲಾಗಿದೆ.
ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಸಮೀಕ್ಷಾ ಕಾರ್ಯ ನಡೆಯುತ್ತಿದ್ದು, ಸಮೀಕ್ಷಾ ಕಾರ್ಯ ಕೈಗೊಳ್ಳಲು ನಿರಾಸಕ್ತಿ ತೋರಿದ ಇಬ್ಬರು ಶಿಕ್ಷಕರು ಹಾಗೂ ಹಾಸ್ಟೆಲ್ ವಾರ್ಡನ್ ಗೆ ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು. ಆದರೆ ನೋಟಿಸ್ ಗೆ ಉತ್ತರ ನೀಡದೆ, ಸಮೀಕ್ಷೆಗೆ ಮೂವರು ಸಿಬ್ಬಂದಿ ಗೈರಾಗಿದ್ದರು. ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಕರ್ನಾಟಕ ಸರ್ಕಾರಿ ಸಿವಿಲ್ ವರ್ಗೀಕರಣ ಮತ್ತು ಅಪೀಲು ನಿಯಮಾವಳಿ 1957ರ ನಿಯಮ 10(1)(d) ಅನ್ವಯ ಆದೇಶ ಹೊರಡಿಸಲಾಗಿದೆ.