ವಿಜಯಸಾಕ್ಷಿ ಸುದ್ದಿ, ಗದಗ : ಎಲ್ಲಿ ನೋಡಿದರಲ್ಲಿ ಬೇಸಿಗೆಯ ಬೇಗೆ ಹೆಚ್ಚುತ್ತಲೇ ಇದೆ. ಕೆಂಡದಂಥ ಬಿಸಿಲಿನ ಝಳಕ್ಕೆ ರಾಜ್ಯದ ಜನ ಹೈರಾಣಾಗುತ್ತಿದ್ದಾರೆ. ನೀರಿನ ಕೊರತೆ ಒಂದೆಡೆ ಸಂಕಷ್ಟ ತಂದೊಡ್ಡುತ್ತಿದ್ದರೆ, ಬೆಳಿಗ್ಗೆ 10ರ ನಂತರ ಹೊರಗೆಲ್ಲೂ ತಲೆಯೆತ್ತಿ ಓಡಾಡಲೂ ಆಗದಂತ ಪರಿಸ್ಥಿತಿ ಎದುರಾಗಿದೆ. ಸಾಕ್ಷಾತ್ತು ಕಾವಲಿಯ ಮೇಲೆ ಕೂತ ಅನುಭವವಾಗುತ್ತಿದೆ. ಅಭಿವೃದ್ಧಿಯ ನಾಗಾಲೋಟದಲ್ಲಿರುವ ಮನುಷ್ಯ ಈ ಎಲ್ಲವುಗಳಿಗೂ ಏನಾದರೊಂದು ತಾತ್ಕಾಲಿಕ ಪರಿಹಾರ ಹುಡುಕಿಬಿಡಬಲ್ಲ. ಆದರೆ, ಮೂಕ ಪ್ರಾಣಿ-ಪಕ್ಷಿಗಳ ಪಾಡು ಹೇಳತೀರದು.
ಇಂತಹ ಪರಿಸ್ಥಿತಿಯಲ್ಲಿ ಮೂಕ ಜೀವಿಗಳ ಸಂಕಷ್ಟಕ್ಕೆ ಮಿಡಿದ ಮನಗಳು ಇಂತಹ ಪ್ರಾಣಿ-ಪಕ್ಷಿಗಳ ದಾಹ ನೀಗಿಸಲು ಮುಂದಾಗಿವೆ. ಕಾಲೇಜು ಆವರಣ, ಮನೆ ಅಂಗಳ, ಮಾಳಿಗೆಗಳ ಮೇಲೆ ಪಕ್ಷಿಗಳಿಗೆ ನೀರು, ಕಾಳು ಇಡುವ ಮೂಲಕ ಮೂಕ ಜೀವಿಗಳ ಸಂಕುಲಕ್ಕೆ ನೆರವಾಗಿ, ಮಾನವೀಯತೆ ತೋರಿದ್ದಾರೆ. ವಿದ್ಯಾರ್ಥಿಗಳ ಈ ಕಾರ್ಯಕ್ಕೆ ಅವಳಿ ನಗರದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

ಗದಗ ನಗರದ ಗ್ರಾಮೀಣ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಇಂತದೊಂದು ಕಾರ್ಯಕ್ಕೆ ಮುಂದಾಗಿದ್ದಾರೆ. ಏಪ್ರಿಲ್ ತಿಂಗಳ ಮೊದಲ ದಿನ ಎಲ್ಲರೂ ಏಪ್ರಿಲ್ ಫೂಲ್ ಮಾಡುವಲ್ಲಿ ನಿರತರಾಗಿದ್ದರೆ, ಈ ಪರಿಸರ ಕಾಳಜಿಯ ವಿದ್ಯಾರ್ಥಿಗಳು ಮಾತ್ರ ಪ್ರಾಣಿ-ಪಕ್ಷಿಗಳಿಗೆ ಆಹಾರ, ನೀರು ಹಾಕುವ ಮೂಲಕ `ಏಪ್ರಿಲ್ ಕೂಲ್ ಡೇ’ ಆಚರಣೆ ಮಾಡುವ ಮೂಲಕ ಒಳ್ಳೆಯ ಸಂದೇಶವನ್ನೇ ನೀಡಿದ್ದಾರೆ. ವಿದ್ಯಾರ್ಥಿಗಳು ಸ್ವಂತ ಖರ್ಚಿನಲ್ಲಿ ಮಣ್ಣಿನ ಮಡಿಕೆ, ವಿವಿಧ ನಮೂನೆಯ ಕಾಳುಗಳನ್ನು ಖರೀದಿಸಿ, ವಿಶ್ವ ವಿದ್ಯಾದ್ಯಾಲಯದ ಆವರಣದಲ್ಲಿ ಅಲ್ಲಲ್ಲಿ ನೀರು, ಕಾಳುಗಳನ್ನು ಇಡುವ ಮೂಲಕ ಪ್ರಾಣಿ, ಪಕ್ಷಿಗಳ ಹಸಿವು, ದಾಹ ನೀಗಿಸಿದರು.
ವಿಶ್ವವಿದಾಯಲಯದ ಆವರಣದಲ್ಲಷ್ಟೇ ಅಲ್ಲದೆ, ತಮ್ಮ ತಮ್ಮ ಮನೆಯ ಅಂಗಳ, ಮಾಳಿಗೆ ಮೇಲೂ ಆಹಾರ, ನೀರು ಇಡುವ ಮೂಲಕ ಮಾನವೀಯತ ತೋರಿದ್ದಾರೆ. ಈ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕಳೆದ 2-3 ವರ್ಷಗಳಿಂದಲೂ ಸದ್ದಿಲ್ಲದೇ ಈ ಕಾರ್ಯ ಮಾಡುತ್ತಿದ್ದಾರೆ.

ವಿಶ್ವ ವಿದ್ಯಾಲಯದ ಆವರಣದಲ್ಲಿ ನಿತ್ಯ ಬೆಳಗ್ಗೆ ಹಾಗೂ ಸಂಜೆಯ ಸಮಯದಲ್ಲಿ ವಿದ್ಯಾರ್ಥಿಗಳು ತಂಡ ತಂಡವಾಗಿ ಹೋಗಿ ಕಾಳು, ನೀರು ಹಾಕಿ ಪ್ರಾಣಿ-ಪಕ್ಷಿಗಳಿಗೆ ಅನಕೂಲ ಆಗುವ ಜಾಗದಲ್ಲಿ ಇಡುತ್ತಾರೆ. ಬಳಿಕ ಪ್ರಾಣಿ, ಪಕ್ಷಿಗಳು ಬಂದು ವಿದ್ಯಾರ್ಥಿಗಳು ಹಾಕಿದ ಆಹಾರ ತಿಂದು, ನೀರು ಕುಡಿದು ಖುಷಿ ಖುಷಿಯಿಂದ ವಾಪಸ್ಸಾಗುವ ದೃಶ್ಯ ಎಂತವರ ಮನಸ್ಸಿಗೂ ಖುಷಿ ನೀಡುವಂತಿವೆ.
ನಾವು ಮನುಷ್ಯರಿಗೇನು ಬಿಡಿ, ಪ್ರತಿಯೊಂದು ಸಮಸ್ಯೆಗೂ ಒಂದಿಲ್ಲೊಂದು ಪರಿಹಾರ ಕಂಡುಕೊಳ್ಳುತ್ತೇವೆ. ಆದರೆ, ಮಾತು ಬಾರದ ಈ ಪ್ರಾಣಿ-ಪಕ್ಷಿಗಳು ಇಂತಹ ಬಿರು ಬೇಸಿಗೆಯನ್ನು ಹೇಗೆ ಎದುರಿಸಿಯಾವು? ಕೆರೆ-ಕಟ್ಟೆಗಳಲ್ಲಿ ಮೊದಲಿನಂತೆ ನೀರು ಸಿಗುತ್ತಿಲ್ಲ. ಹೊಲಗಳಲ್ಲಿ ಬೆಳೆಗಳೆಲ್ಲವೂ ಒಣಗಿಹೋಗಿದ್ದು, ಆಹಾರವೂ ಸಿಗದೆ ಪರದಾಡುವಂತಾಗಿದೆ. ಹೀಗಿರುವಾಗ, ಮನುಷ್ಯರೆನಿಸಿಕೊಂಡ ನಾವು, ಈ ಮೂಕ ಜೀವಿಗಳಿಗೆ ಕೈಲಾದಷ್ಟು ನೀರು, ಆಹಾರ ನೀಡಿ ನೆರವಾಗುವುದೇ ನಿಜವಾದ ಮನುಷ್ಯತ್ವ ಎನಿಸಿಕೊಳ್ಳುತ್ತದೆ. ಆ ಜೀವಿಗಳ ಸಂತೋಷ ವರ್ಣಿಸಲಾಗದ ನೆಮ್ಮದಿ ನೀಡುತ್ತದೆ ಎನ್ನುತ್ತಾರೆ ವಿದ್ಯಾರ್ಥಿಗಳು.


