ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ : ನಾನು ಸಂಸದನಾಗಿ ಆಯ್ಕೆಯಾದಲ್ಲಿ ಹರಪನಹಳ್ಳಿ ಕ್ಷೇತ್ರದಲ್ಲಿ ಪ್ರಮುಖವಾಗಿ ಇರುವ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವ ಗುರಿ ಹೊಂದಿದ್ದು, ಇಂಜಿನಿಯರಿಂಗ್ ಕಾಲೇಜು ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಾಗಿ ಈ ಭಾಗದಲ್ಲಿ ಉತ್ತಮ ಗುಣಮಟ್ಟದ ತರಬೇತಿ ಕೇಂದ್ರ ತೆರೆಯುವ, ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಗುರಿ ಹೊಂದಿದ್ದೇನೆ ಎಂದು ಲೋಕಸಭಾ ಚುನಾವಣಾ ಪ್ರಬಲ ಆಕಾಂಕ್ಷಿ ಜಿ.ಬಿ. ವಿನಯ್‌ಕುಮಾರ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕೆಲ ಪಟ್ಟಾಭದ್ರ ಹಿತಾಸಕ್ತಿಗಳು ಅಹಿಂದ ವರ್ಗದವರಿಗೆ ಟಿಕೆಟ್ ತಪ್ಪಿಸುವ ಹುನ್ನಾರ ನಡೆಸುತ್ತಿದ್ದಾರೆ. ಲೋಕಸಭಾ ಕ್ಷೇತ್ರದ ಎಲ್ಲಾ ತಾಲೂಕುಗಳ ಹಳ್ಳಿಗಳಿಗೆ ಭೇಟಿ ನೀಡಿ ತಳಮಟ್ಟದಿಂದ ಪಕ್ಷ ಸಂಘಟನೆ ಮಾಡುತ್ತಿರುವುದನ್ನು ಪಕ್ಷ ಮನಗಂಡಿದೆ. ಆದ್ದರಿಂದ ನನಗೆ ಈಗಾಗಲೇ ಟಿಕೆಟ್ ಖಚಿತವಾಗಿದ್ದು, ಯಾವುದೇ ಪ್ರಬಲ ಶಕ್ತಿಗಳಿಂದಲೂ ಟಿಕೆಟ್ ತಪ್ಪಿಸಲು ಸಾದ್ಯವಿಲ್ಲ ಎಂದರು.
ಹೊಸಳ್ಳಿ ಮಲ್ಲೇಶ್ ಮಾತನಾಡಿ, ವಿನಯ್ ಕುಮಾರ್ ಅವರಂತಯ ವಿದ್ಯಾವಂತರಿಗೆ ಪಕ್ಷವು ಟಿಕೆಟ್ ನೀಡಲೇಬೇಕು. ಅವರು ಕ್ಷೇತ್ರದ ಕುಂದುಕೊರತೆಗಳನ್ನು ಆಲಿಸುತ್ತ ಪಕ್ಷನ್ನು ತಳಮಟ್ಟದಿಂದ ಪ್ರಬಲಗೊಳಿಸಿದ್ದಾರೆ ಎಂದರು.
ವಾಲ್ಮಿಕಿ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಎಚ್.ಟಿ. ವನಜಾಕ್ಷಿ ಮಾತನಾಡಿದರು. ಮುತ್ತಿಗಿ ಜಂಬಣ್ಣ, ಹುಲಿಯಪ್ಪನವರ ಬಸವರಾಜ, ಖುರ್ಷಿದ್ ಅಹ್ಮದ್, ಗುಡ್ಡಪ್ಪ, ಎಚ್.ಬಿ. ಬಸವರಾಜ, ಕೆಂಚಪ್ಪ, ರಾಘು ದೊಡ್ಡಮನಿ, ಶಿವಪುತ್ರ, ಲಕ್ಷ್ಮಿ ಹಾಗೂ ಇತರರಿದ್ದರು.