ಮೈಸೂರು: ಭಾರೀ ಗಾತ್ರದ ಹುಲಿ ಕಾಣಿಸಿಕೊಂಡ ಹಿನ್ನೆಲೆ ಜನತೆ ಭಯಭೀತರಾಗಿರುವ ಘಟನೆ
ನಂಜನಗೂಡು ತಾಲ್ಲೂಕಿನ ಮಡುವಿನಹಳ್ಳಿ ಗ್ರಾಮದಲ್ಲಿ ಜರುಗಿದೆ.
ಮಡುವಿನಹಳ್ಳಿ ಗ್ರಾಮದ ಸುತ್ತಮುತ್ತ ಹುಲಿ ಹೆಜ್ಜೆ ಗುರುತು ಕಾಣಿಸಿಕೊಂಡಿತ್ತು. ಈ ಹಿನ್ನಲೆ ಗ್ರಾಮದ ರೈತ ಮಲ್ಲಿಕ್ ಪ್ರಸಾದ್ ರವರ ಜಮೀನಿನ ತುಸು ದೂರದ ಹಳ್ಳ ಒಂದರಲ್ಲಿ ಅರಣ್ಯ ಇಲಾಖೆ ಕ್ಯಾಮರಾ ಟ್ರ್ಯಾಪ್ ಅಳವಡಿಸಿತ್ತು.
ಮುಂಜಾನೆ ಇಲಾಖೆ ಕ್ಯಾಮೆರಾದಲ್ಲಿ ಹುಲಿ ತಿರುಗಾಡುತ್ತಿರುವ ದೃಶ್ಯ ಸೆರೆಯಾಗಿದ್ದು, ಮಡುವಿನಹಳ್ಳಿ ಗ್ರಾಮಸ್ಥರು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ. ಸಮೀಪದ ಹೊಸವೀಡುಹುಂಡಿ, ಚಿಲಕಹಳ್ಳಿ,
ಹೆಡಿಯಾಲ ಗ್ರಾಮಗಳಲ್ಲೂ ಹುಲಿ ತಿರುಗಾಡಿರುವ ಹೆಜ್ಜೆ ಗುರುತುಗಳು ಕಾಣಿಸಿಕೊಂಡಿರುವ ಪರಿಣಾಮ ದಿನನಿತ್ಯ ರಾತ್ರಿ ವೇಳೆ ಜಮೀನುಗಳಿಗೆ ಬೆಳೆ ಕಾವಲು ಕಾಯಲು ತೆರಳುವ ರೈತರು ಭಯಭೀತರಾಗಿದ್ದು ಹುಲಿಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.