ವಿಜಯಸಾಕ್ಷಿ ಸುದ್ದಿ, ಬೆಳಗಾವಿ-ಸುವರ್ಣಸೌಧ: ಗ್ರಾಮೀಣ ಪ್ರದೇಶಗಳಲ್ಲಿನ ಕಂದಾಯ ಜಮೀನಿನಲ್ಲಿ ನಿವೇಶನವನ್ನು ಕೇವಲ ಕರಾರು ಒಪ್ಪಂದ ಪತ್ರದಲ್ಲಿ ಖರೀದಿಸಿ, ಮನೆ ನಿರ್ಮಿಸಿಕೊಂಡವರಿಗೆ ಹಕ್ಕುಪತ್ರ ನೀಡಿ, ಖಾತಾ ಒದಗಿಸುವುದಕ್ಕೆ ನಿಯಮಗಳನ್ನು ರೂಪಿಸಲು ಕಾಲಾವಕಾಶ ಬೇಕಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಎನ್. ಗಣೇಶ್ ಅವರ ಪ್ರಶ್ನೆಗೆ ಉತ್ತರಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಬಡ ಕುಟುಂಬಗಳು ಕಂಪ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕಡಿಮೆ ಬೆಲೆಗೆ ನಿವೇಶನಗಳು ದೊರಕುತ್ತದೆ ಎಂದು ಈ ಹಿಂದೆ ಕಂದಾಯ ಜಮೀನಿನ ನಿವೇಶನಗಳಲ್ಲಿ ಜಮೀನಿನ ಮಾಲೀಕರೊಂದಿಗೆ ಅಗ್ರಿಮೆಂಟ್ ಪತ್ರ ಮಾಡಿಕೊಂಡು ಖರೀದಿಸಿ, ಈಗಾಗಲೇ ವಸತಿ ಮನೆಗಳನ್ನು ನಿರ್ಮಿಸಿಕೊಂಡು ವಾಸವಿದ್ದಾರೆ. ಇಂತಹ ಪ್ರಕರಣಗಳು ರಾಜ್ಯಾದ್ಯಂತ ಇವೆ. ಹೀಗಾಗಿ ಇಂತಹವರಿಗೆ ದಾಖಲೆಗಳನ್ನು ಪರಿಶೀಲಿಸಿ, ಹಕ್ಕುಪತ್ರ ಕೊಡಿಸಿ, ಇವರಿಗೆ ನ್ಯಾಯ ಒದಗಿಸಿಕೊಡಬೇಕಿದೆ ಎಂದು ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಮನವಿ ಮಾಡಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಖಾಸಗಿ ಜಮೀನುಗಳಲ್ಲಿ ನೆಲೆಸಿರುವ ದಾಖಲೆ ರಹಿತ ಜನವಸತಿಗಳನ್ನು ಕಂದಾಯ ಗ್ರಾಮ ಅಥವಾ ಗ್ರಾಮದ ಭಾಗವಾಗಿ ಪರಿವರ್ತಿಸಿ, ಅಲ್ಲಿನ ನಿವಾಸಿಗಳಿಗೆ ಭೂಸುಧಾರಣಾ ಕಾಯ್ದೆ ಅನ್ವಯ ಹಕ್ಕುಪತ್ರಗಳನ್ನು ಕಂದಾಯ ಇಲಾಖೆಯಿಂದ ವಿತರಿಸಲು ಅವಕಾಶ ಕಲ್ಪಿಸಲಾಗಿದ್ದು, ಕಂದಾಯ ಇಲಾಖೆಯಿಂದ ಹಕ್ಕುಪತ್ರ ಒದಗಿಸಿದಲ್ಲಿ, ಗ್ರಾಮ ಪಂಚಾಯತಿಗಳಿಗೆ ಖಾತೆ ವಿತರಣೆ ಮಾಡಲು ಅವಕಾಶವಿರುತ್ತದೆ. ಆದರೆ ಕೇವಲ ಅಗ್ರಿಮೆಂಟ್ ಪತ್ರದ ಆಧಾರದಲ್ಲಿ ನಿವೇಶನ ಖರೀದಿಸಿ, ವಸತಿ ನಿರ್ಮಿಸಿದವರಿಗೆ, ಒಂದು ಬಾರಿಯ ಪರಿಹಾರವಾಗಿ ಖಾತಾ ಮಾಡಿಕೊಡಲು ನಿಯಮಗಳನ್ನು ರೂಪಿಸಬೇಕಾಗುತ್ತದೆ. ಇದಕ್ಕೆ ಸಾಕಷ್ಟು ಕಾಲಾವಕಾಶ ಬೇಕಾಗುತ್ತದೆ ಎಂದರು.



