ಆನೇಕಲ್:- ಬೈಕ್ ಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದ ರಾಘವೇಂದ್ರ ಭವನ ರಸ್ತೆಯಲ್ಲಿ ಜರುಗಿದೆ.
40 ವರ್ಷದ ಸೀಮಾಭಾನು ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ. ಮೃತ ಮಹಿಳೆಯು, ತನ್ನ ಪತಿ ಶಹಬಾಜ್ ಜೊತೆ ಬೈಕ್ನಲ್ಲಿ ತೆರಳುತ್ತಿದ್ದರು. ಈ ವೇಳೆ ಅತಿವೇಗವಾಗಿ ಬಂದ ಟಿಪ್ಪರ್ ಚಾಲಕ ಬೈಕ್ ಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ರಭಸಕ್ಕೆ ಬೈಕ್ನಿಂದ ನಿಯಂತ್ರಣ ತಪ್ಪಿ ಸೀಮಾಭಾನು ಕೆಳಗೆ ಬಿದ್ದಿದ್ದಾರೆ. ಈ ವೇಳೆ ಮಹಿಳೆ ತಲೆ ಮೇಲೆ ಟಿಪ್ಪರ್ ಲಾರಿ ಚಕ್ರ ಹರಿದ ಹಿನ್ನೆಲೆ ತೀವ್ರ ರಕ್ತಸ್ರಾವವಾಗಿ ಮಹಿಳೆ ಸೀಮಾಭಾನು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಘಟನೆಯಿಂದ ಪತಿ ಶಹಬ್ಬಾಜ್ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಇನ್ನೂ ನಗರದಲ್ಲಿ ಟಿಪ್ಪರ್ ಲಾರಿಗಳಿಂದ ಪದೇ ಪದೇ ಅಪಘಾತ ಸಂಭವಿಸುತ್ತಿರುವ ಹಿನ್ನೆಲೆ ಟಿಪ್ಪರ್ ಲಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.