ವಿಜಯಸಾಕ್ಷಿ ಸುದ್ದಿ, ಗದಗ : ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಗದುಗಿನ ಜೈನ್ ಸಮಾಜದ ಜೈನ್ ಸಂಘಟನೆ, ಯುವ-ಮಹಿಳಾ ಸಂಘಟನೆಯಿಂದ ಗುರುವಾರ ಏರ್ಪಡಿಸಿದ್ದ ತಿರಂಗಾ ಬೃಹತ್ ರ‍್ಯಾಲಿಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜನಮನ ಸೆಳೆದು ದೇಶಭಕ್ತಿ-ದೇಶಾಭಿಮಾನವನ್ನು ಅಭಿವ್ಯಕ್ತಗೊಳಿಸಿತು.
ಗದಗ ಸ್ಟೇಷನ್ ರಸ್ತೆಯ ಪಾರ್ಶ್ವನಾಥ ಜೈನ ಮಂದಿರದಿಂದ ಧರ್ಮ ಗುರುಗಳ ನೇತೃತ್ವದಲ್ಲಿ ಆರಂಭಗೊಂಡ ಬೃಹತ್ ರ‍್ಯಾಲಿಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮಂದಿರದ ಆವರಣದಲ್ಲಿ ಧರ್ಮ ಗುರುಗಳಾದ ಪೂಜ್ಯ ಆಗಮರತ್ನ ಸಾಗರಜೀ, ಪೂಜ್ಯ ಬ್ರಷಮರತ್ನ ಸಾಗರಜೀ ಹಾಗೂ ಪೂಜ್ಯ ವಜ್ರರತ್ನ ಸಾಗರಜೀ ಅವರ ಸಾನಿಧ್ಯದಲ್ಲಿ ರಾಷ್ಟçಧ್ವಜಾರೋಹಣ ಜರುಗಿತು.
ರಾಜಸ್ಥಾನ ಮೂರ್ತಿಪೂಜಕ ಸಂಘದ ಅಧ್ಯಕ್ಷ ಪಂಕಜ ಭಾಪಣಾ, ವರ್ಧಮಾನ ಸ್ಥಾನಿಕವಾಸಿ ಸಂಘದ ಅಧ್ಯಕ್ಷ ರೂಪಚಂದ ಪಾರಲೇಚಾ, ತೇರಾಪಂಥ ಸಮಾಜದ ಅಧ್ಯಕ್ಷ ರಮೇಶ ಸಂಕಲೇಚಾ, ಗುಜರಾತಿ ಜೈನ ಸಮಾಜದ ಅಧ್ಯಕ್ಷ ವಿಜಯ ಲೂಥಿಯಾ, ವಿಷ್ಣು ಸಮಾಜದ ಅಧ್ಯಕ್ಷ ರಮೇಶ ರಾಜಪುರೋಹಿತ, ಜೈನ ಯುವ ಸಂಘಟನಾ ಅಧ್ಯಕ್ಷ ರಾಕೇಶ ಪರಮಾರ ಹಾಗೂ ಮಹಿಳಾ ಮಂಡಳದ ಪದಾಧಿಕಾರಿಗಳು ಧ್ವಜಾರೋಹಣ ಸಮಾರಂಭದಲ್ಲಿದ್ದರು.
ಸಮಾರಂಭದಲ್ಲಿ ಮಾಜಿ ಸೈನಿಕರಾದ ನಿಂಗಪ್ಪ ಚೋರಗಸ್ತಿ, ಸುಭಾಶ ಬಾಗರೆ, ಸಿದ್ಧಲಿಂಗೇಶ್ವರ ಕಂಠಿ, ಸುಭಾಶ ತುಪ್ಪದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ರ‍್ಯಾಲಿ ಮತ್ತು ಕಾರ್ಯಕ್ರಮದಲ್ಲಿ ಜೈನ ಸಮಾಜದ ಹಿರಿಯರು, ಮಹಿಳೆಯರು, ಯುವಕರು ಪಾಲ್ಗೊಂಡಿದ್ದರು.