ತಿರುಪತಿ:- ವೈಕುಂಠ ಏಕಾದಶಿಗೂ ಮುನ್ನ ಗುರುವಾರ ತಿರುಪತಿಯಲ್ಲಿ ಭೀಕರ ದುರಂತ ಸಂಭವಿಸಿತು. ವೈಕುಂಠದ್ವಾರ ಸರ್ವದರ್ಶನದ ಟಿಕೆಟ್ ವಿತರಣಾ ಕೇಂದ್ರಗಳಲ್ಲಿ ನೂಕುನುಗ್ಗಲು ಉಂಟಾದ ಪರಿಣಾಮ 7 ಮಂದಿ ಸಾವಿಗೀಡಾಗಿದ್ದರು. ಅಲ್ಲದೇ ಸಾಕಷ್ಟು ಮಂದಿ ಗಾಯಗೊಂಡಿದ್ದರು.
ಇದೀಗ ಕಾಲ್ತುಳಿತದಿಂದ ಗಾಯಗೊಂಡ ಗಾಯಾಳುಗಳಿಗೆ ವಿಶೇಷ ದರ್ಶನಕ್ಕೆ ತಿರುಮಲ ತಿರುಪತಿ ದೇವಸ್ಥಾನ ಅವಕಾಶ ಮಾಡಿಕೊಟ್ಟಿದೆ.
ಸಿಎಂ ಚಂದ್ರಬಾಬು ನಾಯ್ಡು ಹಾಗೂ ಡಿಸಿಎಂ ಪವನ್ ಕಲ್ಯಾಣ್ ಸೂಚನೆ ಮೇರೆಗೆ ಸ್ವಿಮ್ಸ್ ಆಸ್ಪತ್ರೆಯಲ್ಲಿರುವ ಗಾಯಾಳುಗಳಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. 20 ಮಂದಿ ಗಾಯಾಳುಗಳುಗಳು ಸರ್ಕಾರಿ ಬಸ್ಸಿನಲ್ಲಿ ಆಸ್ಪತ್ರೆಯಿಂದ ದೇವಾಲಯಕ್ಕೆ ಪ್ರಯಾಣ ಮಾಡಿ ದೇವರ ದರ್ಶನ ಮಾಡಲಿದ್ದಾರೆ.
ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ತಿರುಪತಿ ತಿರುಮಲಕ್ಕೆ ಭಕ್ತ ಸಾಗರವೇ ಹರಿದು ಬಂದಿದೆ. ಕಾಲ್ತುಳಿತದ ಬಳಿಕ ಎಚ್ಚೆತ್ತ ಆಂಧ್ರಪ್ರದೇಶ ಸರ್ಕಾರ ಹಾಗೂ ಟಿಟಿಡಿ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರ ವಹಿಸಿದೆ.
ತಿರುಪತಿಯಲ್ಲಿ ನಿರ್ಲಕ್ಷ್ಯ ವಹಿಸಿದ ಅಧಿಕಾರಗಳ ತಲೆದಂಡವಾಗಿದೆ. ಡಿವೈಎಸ್‌ಪಿ ರಮಣಕುಮಾರ್ ಹಾಗೂ ಗೋಶಾಲೆ ಡಿಡಿ ಹರಿನಾಥ ರೆಡ್ಡಿ ಅವರನ್ನು ಆಂಧ್ರಪ್ರದೇಶ ಸರ್ಕಾರ ಅಮಾನತು ಮಾಡಿದೆ. ಎಸ್‌ಪಿ ಸುಬ್ಬರಾಯಡು ಹಾಗೂ ಇಓ ಗೌತಮಿ, ಸಿಎಸ್ ಓ ಶ್ರೀಧರ್ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಇನ್ನೂ ಮತ್ತೊಂದೆಡೆ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಕಾಲ್ತುಳಿತ ಪ್ರಕರಣದಲ್ಲಿ 7 ಜನರು ಮೃತಪಟ್ಟ ಘಟನೆ ಜನಾಕ್ರೋಶಕ್ಕೆ ಕಾರಣವಾಗಿದೆ. ಲಕ್ಷಾಂತರ ಮಂದಿ ಪ್ರತಿದಿನ ಭೇಟಿ ನೀಡುವ ದೇವಸ್ಥಾನದಲ್ಲಿ ಜನರನ್ನು ನಿಯಂತ್ರಿಸಲು ಅಧಿಕಾರಿಗಳು ವಿಫಲವಾಗಿದ್ದು, ವ್ಯಾಪಕ ಟೀಕೆಗೆ ಕಾರಣವಾಗಿದೆ.