ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸ್ವಾತಂತ್ರ್ಯ ಬಂದು 79 ವರ್ಷಗಳಾದರೂ, ದೇಶದಲ್ಲಿ ಶೇ. 76ರಷ್ಟು ಸಾಕ್ಷರತೆ ಸಾಧಿಸಿದ್ದರೂ ಜಾತೀಯತೆ ಇನ್ನೂ ಹೋಗಿಲ್ಲ. ಜಾತಿ ವ್ಯವಸ್ಥೆ ಮರೆಯಾಗಬೇಕೆಂದು ಬಸವಣ್ಣನವರು 800 ವರ್ಷಗಳ ಹಿಂದೆಯೇ ಪ್ರಯತ್ನಿಸಿದ್ದರೂ ಸಾಧ್ಯವಾಗಲಿಲ್ಲ. ದೇಶದಲ್ಲಿ ಜಾತಿ ಮತ್ತು ಅಸಮಾನತೆಯಂತಹ ಪಿಡುಗುಗಳನ್ನು ತೊಡೆದುಹಾಕಿ ಸಮಾನತೆಯ ಸಮಾಜ ಹಾಗೂ ಜಾತ್ಯಾತೀತ ರಾಷ್ಟ್ರವನ್ನು ಕಟ್ಟಲು ವಿದ್ಯಾರ್ಥಿಗಳು ಮತ್ತು ಶಿಕ್ಷಿತ ಸಮುದಾಯದಲ್ಲಿ ವಿಜ್ಞಾನ ಮತ್ತು ವೈಚಾರಿಕ ಮನೋಭಾವ ಬೆಳೆಸುವುದು ಅತ್ಯಗತ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಲಕ್ಷ್ಮೇಶ್ವರದ ಸಿಬಿಎಸ್ಇ ಸ್ಕೂಲ್ ಚಂದನದಲ್ಲಿ ಭಾರತ ರತ್ನ ಪ್ರೊ. ಸಿ.ಎನ್.ಆರ್. ರಾವ್ ಅವರ 10ನೇ ವರ್ಷದ ವಿಜ್ಞಾನ ವಿಸ್ತೃತ ಕಾರ್ಯಕ್ರಮದ ಉದ್ಘಾಟನೆ ಹಾಗೂ `ಚಂದನ ಶ್ರೀ–2025’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಕಾರಣಕ್ಕಾಗಿಯೇ ಹಿಂದಿನ ಅವಧಿಯಲ್ಲಿ ಮೌಢ್ಯ ವಿರೋಧಿ ಕಾಯ್ದೆಯನ್ನು ಜಾರಿಗೊಳಿಸಲಾಯಿತು. ಕಲಿಕೆಯ ಹಂತದಲ್ಲಿಯೇ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕತೆ ಮತ್ತು ವೈಚಾರಿಕತೆಯನ್ನು ಬೆಳೆಸಿದರೆ ಮಾತ್ರ ಮಾನವೀಯ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದರು.
ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ನಿವೃತ್ತರಾದ, ರೈತ ಕುಟುಂಬದಿಂದ ಬಂದ ಬಿ.ಎಸ್. ಪಾಟೀಲರ ಸೇವೆ ಗುರುತಿಸಿ `ಚಂದನಶ್ರೀ’ ಪ್ರಶಸ್ತಿ ನೀಡಿರುವುದು ಸಂತೋಷದ ವಿಚಾರ. ಜೆ.ಎಚ್. ಪಟೇಲ್ ಅವರ ಅವಧಿಯಲ್ಲಿ ಪಾಟೀಲ ಅವರು ಅತಿ ಹೆಚ್ಚು ಕೆಲಸ ಮಾಡಿದರು. ಬಿಬಿಎಂಪಿ ವಿಭಜನಾ ಸಮಿತಿಯ ಸದಸ್ಯರಾಗಿ ವರದಿ ನೀಡಿದ್ದರು. ಅದರಂತೆ ನಮ್ಮ ಸರ್ಕಾರ ಬೆಂಗಳೂರು ನಗರವನ್ನು ಐದು ವಿಭಾಗಗಳಾಗಿ ವಿಂಗಡಿಸಿ, ಗ್ರೇಟರ್ ಬೆಂಗಳೂರು ಮಾಡುವ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಪ್ರೊ. ಸಿ.ಎನ್.ಆರ್. ರಾವ್ ಅವರು ದೇಶ ಕಂಡ ಅಪರೂಪದ ವಿಜ್ಞಾನಿ ಮತ್ತು ಸಾಧಕ. ಎಸ್ಸೆಸ್ಸೆಲ್ಸಿವರೆಗೆ ಕನ್ನಡದಲ್ಲಿಯೇ ಓದಿ, ವಿಜ್ಞಾನ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದವರಲ್ಲಿ ಅವರೂ ಒಬ್ಬರು. ಲಕ್ಷ್ಮೇಶ್ವರದ ಚಂದನ ಶಾಲೆಯಂತಹ ಸಂಸ್ಥೆಗಳು ವಿಜ್ಞಾನ ಮತ್ತು ವೈಚಾರಿಕತೆಗೆ ಹೆಚ್ಚು ಮಹತ್ವ ನೀಡುತ್ತಿರುವುದು ಶ್ಲಾಘನೀಯ ಎಂದರು.
ಕಾನೂನು ಹಾಗೂ ಪ್ರವಾಸೋದ್ಯಮ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಸಿದ್ದರಾಮಯ್ಯ ರೈತರ ಸಮಸ್ಯೆಗೆ ಸ್ಪಂದಿಸಿದ್ದಾರೆ. ಉತ್ತರ ಕರ್ನಾಟಕ ಭಾಗದ ಪ್ರಮುಖ ನೀರಾವರಿ ಯೋಜನೆ ಯುಕೆಪಿ 3ನೇ ಹಂತದ ಜಾರಿಗೆ 75 ಸಾವಿರ ಎಕರೆ ಭೂಸ್ವಾಧೀನ ಆಗಬೇಕು. ಕಾಲುವೆ ನಿರ್ಮಾಣಕ್ಕೆ 50 ಸಾವಿರ ಎಕರೆ ಭೂಸ್ವಾಧೀನ ಆಗಬೇಕು. ಪ್ರತಿ ಎಕರೆ ನೀರಾವರಿಗೆ 40 ಲಕ್ಷ ರೂ., ಖುಷ್ಕಿ ಜಮೀನಿಗೆ 30 ಲಕ್ಷ ರೂ. ಪರಿಹಾರ ನೀಡುವ ಮೂಲಕ ಸಿದ್ದರಾಮಯ್ಯ ರೈತರ ಹಿತ ಕಾಯುವ ಕೆಲಸ ಮಾಡಿದ್ದಾರೆ ಎಂದರು.
ರಾಜ್ಯದಲ್ಲಿ ಇನ್ಫೋಸಿಸ್ ಸ್ಥಾಪನೆಗೆ ಮೊಟ್ಟಮೊದಲು ನೆರವು ನೀಡಿದವರು ಬಿ.ಎಸ್. ಪಾಟೀಲ. ಇದನ್ನು ಸ್ವತಃ ನಾರಾಯಣಮೂರ್ತಿ ಅವರೇ ತಮ್ಮ ಪುಸ್ತಕದಲ್ಲಿ ಸ್ಮರಿಸಿದ್ದಾರೆ. ಉತ್ತರ ಕರ್ನಾಟಕ ಭಾಗಕ್ಕೆ ಕೈಗಾರಿಕೆ ಸ್ಥಾಪನೆ ಜೊತೆಗೆ ಗದಗ ಪ್ರತ್ಯೇಕ ಜಿಲ್ಲೆಯಾಗಲು ಬಿ.ಎಸ್. ಪಾಟೀಲ ಮುಖ್ಯ ಕಾರಣ ಎಂದರು.
ಚಂದನ ಸ್ಕೂಲ್ ಸಂಸ್ಥಾಪಕ ಟಿ. ಈಶ್ವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿ.ಎನ್.ಆರ್. ರಾವ್ ಮತ್ತು ಇಂದುಮತಿ ರಾವ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ರೋಣ ಶಾಸಕ ಜಿ.ಎಸ್. ಪಾಟೀಲ, ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕರಾದ ಜಿ.ಎಸ್. ಗಡ್ಡದೇವರಮಠ, ಬಿ.ಆರ್. ಯಾವಗಲ್, ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಕಾಂಗ್ರೆಸ್ ಮುಖಂಡರಾದ ಆನಂದಸ್ವಾಮಿ ಗಡ್ಡದೇವರಮಠ, ಸುಜಾತಾ ದೊಡ್ಡಮನಿ, ಹುಮಾಯೂನ್ ಮಾಗಡಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಪ್ರೊ. ಶಿವಪ್ರಸಾದ, ಆರ್.ಎಸ್. ಪಾಟೀಲ, ಎಸ್.ಪಿ. ಬಳಿಗಾರ, ಮಿಥುನ್ ಪಾಟೀಲ, ವಿದ್ಯಾನಂದ ಸ್ವಾಮೀಜಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗ್ರೇಟರ್ ಬೆಂಗಳೂರು ನಿರ್ಮಾಣಕ್ಕೆ ಕಾರಣರಾದ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್. ಪಾಟೀಲರಿಗೆ ಸಿದ್ದರಾಮಯ್ಯ ಅವರು `ಚಂದನ ಶ್ರೀ–2025’ ಪ್ರಶಸ್ತಿ ಪ್ರದಾನ ಮಾಡಿದರು. ಸ್ಕೂಲ್ ಚಂದನದ ಗೌರವ ನಿರ್ದೇಶಕರಾಗಿ 22 ವರ್ಷಗಳ ಕಾಲ ಸೇವೆ ಸಲ್ಲಿಸಿದ ಎಚ್.ಸಿ. ರಟಗೇರಿ ಅವರ ಪುತ್ಥಳಿ ಅನಾವರಣಗೊಳಿಸಿದರು.
“ದೇವರು ಮತ್ತು ಧರ್ಮ ಎಂದಿಗೂ ಅಸಮಾನತೆಯನ್ನು ಬಯಸುವುದಿಲ್ಲ. ಯಾವ ಧರ್ಮವೂ ದ್ವೇಷ ಬಿತ್ತುವ ಕೆಲಸ ಮಾಡಲ್ಲ, ಎಲ್ಲ ಧರ್ಮಗಳು ಪ್ರೀತಿಯನ್ನೇ ಬೋಧಿಸುತ್ತವೆ. ಆದರೆ ಸಮಾಜದಲ್ಲಿ ಕೆಲವರು ಧರ್ಮವನ್ನು ತಪ್ಪಾಗಿ ವ್ಯಾಖ್ಯಾನಿಸಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಸುಶಿಕ್ಷಿತರೂ ಸಹ ಹಿಂದಿನ ಜನ್ಮದ ಪಾಪ–ಪುಣ್ಯ ಮತ್ತು ಹಣೆಬರಹದ ಬಗ್ಗೆ ಮಾತನಾಡುತ್ತಿರುವುದು ದುರ್ದೈವದ ಸಂಗತಿ”
– ಸಿದ್ದರಾಮಯ್ಯ
ಮುಖ್ಯಮಂತ್ರಿಗಳು.



