ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಗೋವಿನಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭವಾಗಬೇಕು, ರೈತರಿಗೆ ಬೆಳೆವಿಮೆ, ಬೆಳೆಹಾನಿ ಪರಿಹಾರ ಜಮಾ ಮಾಡಬೇಕು ಎಂಬಿತ್ಯಾದಿ ಬೇಡಿಕೆಗಳಿಗೆ ಆಗ್ರಹಿಸಿ ಶನಿವಾರ ರೈತ ಸಂಘಟನೆಗಳು ಕೈಗೊಂಡ ಪ್ರತಿಭಟನಾ ಮೆರವಣಿಗೆ ಮತ್ತು ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು.
ರೈತರು, ರೈತ ಮುಖಂಡರು, ವಿವಿಧ ಕನ್ನಡಪರ ಸಂಘಟನೆಗಳು, ಕೃಷಿ ಪರಿಕರ ಮಾರಾಟಗಾರ ಸಂಘದವರು ಸೇರಿ ಎತ್ತು-ಚಕ್ಕಡಿಗಳನ್ನೊಳಗೊಂಡ ಪ್ರತಿಭಟನಾ ಮೆರವಣಿಗೆ ಪಟ್ಟಣದ ಸೋಮೇಶ್ವರ ದೇವಸ್ಥಾನದಿಂದ ಪ್ರಾರಂಭಗೊಳಿದು ಮುಖ್ಯ ಬಜಾರ್ ರಸ್ತೆಯ ಮೂಲಕ ಸಾಗಿ ಕೆಲ ಹೊತ್ತು ಪಾಳಾ-ಬಾದಾಮಿ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು. ಬಳಿಕ ಶಿಗ್ಲಿ ನಾಕಾದ ಹತ್ತಿರ ನಿಗದಿಪಡಿಸಿದ ಧರಣಿ ಸ್ಥಳದಲ್ಲಿ ಬೇಡಿಕೆಗಳಿಗೆ ಆಗ್ರಹಿಸಿ ಮತ್ತು ಸರ್ಕಾರದ ಧೋರಣೆಗಳ ವಿರುದ್ಧ ಘೋಷಣೆ ಕೂಗಿದರು.
ಈ ವೇಳೆ ಮಾತನಾಡಿದ ಉತ್ತರ ಕರ್ನಾಟಕ ಮಹಾಸಭಾ ರಾಜ್ಯಾಧ್ಯಕ್ಷ, ವಕೀಲ ರವಿಕಾಂತ ಅಂಗಡಿ, ಉತ್ತರ ಕರ್ನಾಟಕ ಭಾಗದ ರೈತರು ಮಳೆಯನ್ನೇ ಆಧರಿಸಿ ಕೃಷಿಯನ್ನೇ ನಂಬಿ ಬದುಕುತ್ತಾರೆ. ಈ ವರ್ಷ ಅತಿವೃಷ್ಟಿಯಿಂದ ಮುಂಗಾರಿನ ಬೆಳೆಗಳೆಲ್ಲ ಹಾಳಾಗಿದೆ. ಇದೀಗ ಮೆಕ್ಕೆಜೋಳದ ಬೆಳೆಯೇ ಬದುಕಿಗೆ ಆಸರೆಯಾಗಿದೆ. ಆದರೆ ಸರ್ಕಾರ ಘೋಷಿಸಿದ 2400 ರೂ ಕನಿಷ್ಠ ಬೆಂಬಲ ಬೆಲೆ ಘೋಷಣೆಗೆ ಸೀಮಿತವಾಗಿದೆ. ಸದ್ಯ ಕ್ವಿಂಟಲ್‌ಗೆ 1700-1800 ರೂಪಾಯಿಗೂ ಸಹ ಗೋವಿನ ಜೋಳದ ಬೆಳೆ ಖರೀದಿಸುವವರಿಲ್ಲದಂತಾಗಿದೆ. ರೈತರಿಗೆ ದಿಕ್ಕು ತೋಚದಂತಾಗಿದ್ದು, ಈ ಸಂದರ್ಭದಲ್ಲಿ ರೈತರಿಗೆ ನಿಮ್ಮೊಂದಿಗೆ ನಾವಿದ್ದೇವೆ ಎಂದು ಆತ್ಮಸ್ಥೈರ್ಯ ತುಂಬುವ, ಹೋರಾಟಕ್ಕೆ ಬೆಂಬಲವಾಗಿ ನಿಲ್ಲಬೇಕಾದ ಈ ಭಾಗದ ಜನಪ್ರತಿನಿಧಿಗಳು ಇಸ್ಪೀಟ್ ಆಡುವ ವ್ಯಕ್ತಿಗಳ ಪರವಾಗಿ ಪೊಲೀಸ್ ಠಾಣೆಯ ಮುಂದೆ ಅಹೋರಾತ್ರಿ ಪ್ರತಿಭಟನೆ, ಧರಣಿ ಮಾಡುತ್ತಿರುವುದು ನೋವಿನ ಸಂಗತಿಯಾಗಿದೆ ಎಂದರು.
ಹೋರಾಟದ ನೇತೃತ್ವ ವಹಿಸಿರುವ ರೈತ ಮುಖಂಡ ಮಂಜುನಾಥ ಮಾಗಡಿ, ಹೊನ್ನಪ್ಪ ವಡ್ಡರ, ಚಂಬಣ್ಣ ಬಾಳಿಕಾಯಿ ಮಾತನಾಡಿ, ಲಕ್ಷ್ಮೇಶ್ವರ ತಾಲೂಕಿನ ವ್ಯಾಪ್ತಿಯಲ್ಲಿ 21 ಸಾವಿರ ಹೆಕ್ಟೇರ್ ಮತ್ತು ಶಿರಹಟ್ಟಿ ತಾಲೂಕಿನಲ್ಲಿ 24 ಸಾವಿರ ಹೇಕ್ಟೇರ್ ಪ್ರದೇಶದಲ್ಲಿ ಗೋವಿನಜೋಳ ಬೆಳೆಯಲಾಗಿದೆ. ಈಗಾಗಲೇ ಒಂದು ತಿಂಗಳಿಂದ ರೈತರು ಗೋವಿನಜೋಳ ಒಕ್ಕಲಿಸಿ ಇಟ್ಟುಕೊಂಡಿದ್ದು ಮಾರಾಟ ಮಾಡದಿದ್ದರೆ ಹುಳ ಹಿಡಿಯುತ್ತದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಜವಾಬ್ದಾರಿಯಿಂದ ನುಣುಚಿಕೊಳ್ಳದೇ ಖರೀದಿ ಕೇಂದ್ರ ಸ್ಥಾಪಿಸಬೇಕು. ಸಂಬಂಧಪಟ್ಟವರು ಸ್ಪಂದಿಸದಿದ್ದರೆ ರೈತರು ರಾಜ್ಯ ಹೆದ್ದಾರಿ ಬಂದ್ ಮಾಡಿ ಹೋರಾಟಕ್ಕಿಳಿಯಬೇಕಾಗುತ್ತದೆ ಎಂದು ಸರ್ಕಾರಕ್ಕೆ ಪರೋಕ್ಷ ಎಚ್ಚರಿಕೆ ನೀಡಿದರು.
ಕೃಷಿಕ ಸಮಾಜದ ರಾಜ್ಯಾಧ್ಯಕ್ಷೆ ಮಾಣಿಕ್ಯ ಚಿಲ್ಲೂರ ಮಾತನಾಡಿ, ಬೆಂಬಲ ಬೆಲೆ ಘೋಷಣೆಗೆ ಸೀಮಿತವಾಗಬಾರದು. ಈ ವಿಷಯದಲ್ಲಿ ರೈತರ ಹೆಸರಿನಲ್ಲಿ ಅಧಿಕಾರ ಹಿಡಿಯುವ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು. ಬೆಂಬಲ ಬೆಲೆ ಖರೀದಿ ಕೇಂದ್ರಗಳು ವರ್ಷದುದ್ದಕ್ಕೂ ಕಾರ್ಯ ನಿರ್ವಹಿಸಬೇಕು. ಕಬ್ಬು, ಭತ್ತ, ಅಡಿಕೆ, ಕಾಫಿ ಬೆಳೆಗಾರರ ಹೋರಾಟಕ್ಕೆ ಮಣಿಯುವ ಸರ್ಕಾರಗಳು ಉತ್ತರ ಕರ್ನಾಟಕ ಭಾಗದ ಆಹಾರ ಧಾನ್ಯ ಬೆಳೆಯುವ ರೈತರ ಬಗ್ಗೆ ಏಕೆ ನಿರ್ಲಕ್ಷ್ಯ ತೋರುತ್ತೀರಿ ಎಂದರು.
ಮಧ್ಯಾಹ್ನ ಧರಣಿ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ ರಾಘವೇಂದ್ರ ಕೆ, ತಮ್ಮ ಬೇಡಿಕೆಗಳು ಸರ್ಕಾರದ ಹಂತದ್ದಾಗಿವೆ. ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮಾಹಿತಿ ಸಲ್ಲಿಸಲಾಗಿದೆ. ಇನ್ನಷ್ಟು ಕಾಲಾವಕಾಶ ನೀಡಿ ಧರಣಿಯಿಂದ ಹಿಂದೆ ಸರಿಯುವಂತೆ ಮನವಿ ಮಾಡಿದರು. ಇದಕ್ಕೆ ಧರಣಿ ನಿರತ ರೈತರು ಕಿಂಚಿತ್ತೂ ಒಪ್ಪದ ಕಾರಣ ತಹಸೀಲ್ದಾರರು ವಾಪಸ್ ಹೋದರು.
ರೈತರ ಹೋರಾಟದಲ್ಲಿ ಜಿ.ಪಂ ಮಾಜಿ ಅಧ್ಯಕ್ಷ ಎಸ್.ಪಿ. ಬಳಿಗಾರ, ಎಂ.ಎಸ್. ದೊಡ್ಡಗೌಡ್ರ, ರಾಜಶೇಖರ ಖಾತರಕಿ, ಬಸಣ್ಣ ಬೆಂಡಿಗೇರಿ, ಸೋಮಣ್ಣ ಡಾಣಗಲ್, ಭರಮಣ್ಣ ರೊಟ್ಟಿಗವಾಡ, ಅಶೋಕ ಬಟಗುರ್ಕಿ, ಪೂರ್ಣಜಿ ಖರಾಟೆ, ಎಂ.ಆಯ್. ಮುಳಗುಂದ, ರಾಮಣ್ಣ ಗೌರಿ, ಲೋಕೇಶ ಸುತಾರ, ಎಂ.ಬಿ. ಪೂಜಾರ, ಲೋಕೇಶ ಜಾಲವಾಡಗಿ, ಸುರೇಶ್ ಹಟ್ಟಿ, ನಿಂಬಣ್ಣ ಮಡಿವಾಳರ, ಅಜಯ ಕರಿಗೌಡ್ರ, ಚಂದ್ರು ತಳವಾರ, ಬಸವರಾಜ ಜಾಲಗಾರ, ಗುರುಪ್ಪ ಮುಳಗುಂದ, ಶಿವಾನಂದ ಲಿಂಗಶೆಟ್ಟಿ, ಮಂಜುನಾಥ ಬಟ್ಟೂರ, ಕಾಶಪ್ಪ ಮುಳಗುಂದ, ಶೇಖರಗೌಡ ಕೊರಡೂರ, ನಾಗರಾಜ ದೊಡ್ಡಮನಿ, ಮೌನೇಶ ದೊಡ್ಡಮನಿ, ಶಂಕರ ಬ್ಯಾಡಗಿ, ಶಿವಾನಂದ ದೇಸಾಯಿ, ಶೇಖರಗೌಡ ಕರಿಗೌಡ್ರ, ಮಂಜನಗೌಡ ಕೆಂಚನಗೌಡ್ರ, ಅಮರಪ್ಪ ಗುಡಗುಂಟಿ, ಶಿವಪುತ್ರಪ್ಪ ತಾರಿಕೊಪ್ಪ, ರಮೇಶ ಕೋಳಿವಾಡ, ಮಂಜುಳಾ ಹಿರಗುಪ್ಪನವರ, ನೀಲಮ್ಮ ಕಂಬಳಿ, ಕಸ್ತೂರೆವ್ವ ಅಕ್ಕಿವಾಟೆ, ನಿರ್ಮಲಾ ಹಣಸಿಯವರ, ನೀಲಮ್ಮ ಇಟಗಿ ಸೇರಿ ತಾಲೂಕಾ ಸಮಗ್ರ ರೈತ ಹೋರಾಟ ಸಮಿತಿ, ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘ, ಭಾರತೀಯ ಕಿಸಾನ್ ಸಂಘ, ರಾಜ್ಯ ರೈತ ಸಂಘ, ಕೃಷಿಕ ಸಮಾಜ (ದೆಹಲಿ), ಜಯಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ಕರವೇ (ನಾರಾಯಣಗೌಡ ಬಣ), ಜನಪರ ಅಭಿವೃದ್ಧಿ ವೇದಿಕೆ, ಕೃಷಿ ಪರಿಕರ ಮಾರಾಟಗಾರರು ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ರೈತರೆಲ್ಲ ಬೆಳೆ ಮಾರಾಟ ಮಾಡಿದ ಮೇಲೆ ಖರೀದಿ ಕೇಂದ್ರ ಪ್ರಾರಂಭವಾದರೆ ಅದು ಸ್ಮಶಾನ ಕೇಂದ್ರ ತೆರೆದಂತಾಗುತ್ತದೆ. ಸಂಕಷ್ಟದಲ್ಲಿರುವ ರೈತರಿಗೆ ಈಗಲಾದರೂ ಈ ಭಾಗದ ಸಂಸದರು, ಸಚಿವರು, ಶಾಸಕರು ರೈತರ ಹೋರಾಟಕ್ಕೆ ಬೆಂಬಲವಾಗಿ ನಿಂತು ಅವರಿಗೆ ನ್ಯಾಯ ಕೊಡಿಸಲು ಮುಂದಾಗಬೇಕು. ನಿರ್ಲಕ್ಷ್ಯ ತೋರಿದರೆ ಹೋರಾಟದ ಸ್ವರೂಪ ಬದಲಾಗಲಿದೆ. ರೈತರ ಆಕ್ರೋಶದ ಕಟ್ಟೆಯೊಡೆದು ಉಂಟಾಗುವ ಅನಾಹುತಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಉತ್ತರ ಕೊಡಬೇಕಾಗುತ್ತದೆ ಎಂದು ರವಿಕಾಂತ ಅಂಗಡಿ ಎಚ್ಚರಿಸಿದರು.


