ವಿಜಯಸಾಕ್ಷಿ ಸುದ್ದಿ, ಗದಗ : ಜೀವನವೆಂಬುದು ದೇವರು ನೀಡಿದ ಅದ್ಭುತ ಕೊಡುಗೆ. ಈ ಜೀವನ ಸುಖ-ದುಃಖಗಳ ಸಾಗರ. ಏನೇ ಬರಲಿ ಎಲ್ಲವನ್ನೂ ಸಹನೆ, ಶ್ರದ್ಧೆ, ಭಕ್ತಿ-ಭಾವದಿಂದ ಬದುಕಿ ಬಾಳುವದು ಮುಖ್ಯವಾದ ಸಂಗತಿಯಾಗಿದೆ ಎಂದು ಸಮುದಾಯ ಜಿಮ್ಸ್ನ ಡಾ. ಅರವಿಂದ ಕರಿನಾಗಣ್ಣವರ ಅಭಿಪ್ರಾಯಪಟ್ಟರು.
ಜಿಲ್ಲಾ ಕಾರಾಗೃಹ, ಗದಗ ನಿರ್ಮಲ ವಿವಿಧೋದ್ದೇಶಗಳ ಸೇವಾ ಸಂಸ್ಥೆ ಮುಂಡರಗಿ ಇವುಗಳ ಸಹಯೋಗದಲ್ಲಿ `ತಂಬಾಕು ಮುಕ್ತ ಸಮಾಜ’ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ತಂಬಾಕಿನಂತಹ ವಿಷಯುಕ್ತ ವಸ್ತು, ಧೂಮಪಾನ ನಮ್ಮ ಆಯುಷ್ಯವನ್ನು ತಿನ್ನುತ್ತದೆ. ಒಂದೇ ಒಂದು ಸಿಗರೇಟನ್ನು ಸೇದುವದರಿಂದ 11 ನಿಮಿಷ ಆಯುಷ್ಯ ಕಡಿಮೆಯಾಗುತ್ತದೆ. ರಕ್ತನಾಳಗಳನ್ನು ನಿಲ್ಲಿಸಿ ಅನೇಕ ಕಾಯಿಲೆಗಳಿಗೆ ಆಹ್ವಾನ ನೀಡುತ್ತದೆ. ನಾವು ಸೇದಿ ಬಿಡುವ ಹೊಗೆಯಲ್ಲಿ ಸಾವಿರಾರು ಕ್ರಿಮಿಗಳು ಇರುತ್ತವೆ. ಅವುಗಳಿಂದ ನಮ್ಮ ಜೊತೆಗಿದ್ದವರಿಗೂ ಅದರ ಪರಿಣಾಮ ಬೀರುತ್ತದೆ.
ಹೀಗಾಗಿ ಚಟ ಮಾಡುವವರು ತಮ್ಮ ಮಾನಸಿಕ, ದೈಹಿಕ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ. ನಮ್ಮ ಯುವಕರು ಸಣ್ಣ ವಯಸ್ಸಿನಲ್ಲಿ ನಿಶ್ಯಕ್ತಿಗೆ ಬಲಿಯಾಗುತ್ತಾರೆ. ಬದುಕುವ ಭರವಸೆಯನ್ನು ಕಳೆದುಕೊಳ್ಳುತ್ತಾರೆ. ಯಾವುದೇ ಪರಿಸ್ಥಿತಿಯಲ್ಲಿಯೂ ತಮ್ಮ ತಾಳ್ಮೆಯನ್ನು ಕಳೆದುಕೊಳ್ಳಬಾರದು ಎಂದು ಕಾರಾಗೃಹದ ಕೈದಿಗಳಿಗೆ ಕಿವಿಮಾತು ಹೇಳಿದರು.
ಕಾರಾಗೃಹದ ಅಧೀಕ್ಷಕರಾದ ಈರಣ್ಣ ರಂಗಾಪೂರ ಮಾತನಾಡಿದರು. ಕಾರ್ಯಕ್ರಮದ ಉಪಸ್ಥಿತಿ ವಹಿಸಿದ್ದ ನಿರ್ಮಲ ಸೇವಾ ಸಂಸ್ಥೆ ಅಧ್ಯಕ್ಷರಾದ ನಿರ್ಮಲಾ ತರವಾಡೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಂದಾನೆಪ್ಪ ವಿಭೂತಿ, ಜೈಲರ್ ಸುನಂದಾ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಮಂಜುಳಾ ವೆಂಕಟೇಶಯ್ಯ, ಸುನಿಲ ಕುಮಾರ ಟಿಕಲ್, ಮಹಾಂತೇಶ ಬೆರಗಣ್ಣವರ, ಚಂದ್ರಕಲಾ ಇಟಗಿಮಠ, ಶಿ ಕಸ್ತೂರಿ ಕಡಗದ ಕವಿತೆ ವಾಚಿಸಿದರು. ಕಾರಾಗೃಹದ ಸಿಬ್ಬಂದಿ ಸೋಮಶೇಖರ ಕಾಳೆ ಪ್ರಾರ್ಥಿಸಿದರು. ಪ್ರೊ. ಬಸವರಾಜ ನೆಲಜೇರಿ ನಿರೂಪಿಸಿ ವಂದಿಸಿದರು.
ಸಾಹಿತಿಗಳಾದ ಆಯ್ಕೆ ಕಮ್ಮಾರ ಮಾತನಾಡಿ, ಆರೋಗ್ಯವೊಂದನ್ನು ಕಳೆದುಕೊಂಡರೆ ಎಲ್ಲವನ್ನೂ ಕಳೆದುಕೊಂಡಂತೆ. ಮಾನವರಾಗಿ ಬದುಕುವ ನಾವು, ಕೈ ಮೀರಿ ಆಗುವಂತಹ ತಪ್ಪುಗಳನ್ನು ತಿದ್ದಿಕೊಂಡು ಆದರ್ಶಮಯ ಬದುಕನ್ನುಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಜನಪದ ಕಲಾವಿದರಾದ ಗವಿಸಿದ್ದಯ್ಯ ಹಳ್ಳಿಕೇರಿಮಠ ಜನಪದ ರಂಜನೆಯ ಮೂಲಕ ಜೀವನದ ಮೌಲ್ಯವನ್ನು ತಿಳಿಸಿದರು.