ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಲಿಂಗೈಕ್ಯ ಬಸವರಾಜೇಂದ್ರ ಮಹಾಸ್ವಾಮಿಗಳ 13ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಇಲ್ಲಿಯ ಅಲ್ಲಮಪ್ರಭುದೇವರ ಮಠದ ರಥೋತ್ಸವವು ಶುಕ್ರವಾರ ಸಂಜೆ 4.45ಕ್ಕೆ ಜರುಗಲಿದೆ.
ಹರ್ಲಾಪೂರದ ಡಾ. ಕೊಟ್ಟೂರೇಶ್ವರ ಶ್ರೀಗಳು, ಶ್ರೀಮಠದ ಸಿದ್ಧಲಿಂಗೇಶ್ವರ ಶ್ರೀಗಳು, ಹೊಸರಿತ್ತಿಯ ಗುದ್ದಲೀಶ್ವರ ಶ್ರೀಗಳು, ಸೊರಟೂರ ವಿರಕ್ತಮಠದ ಶಿವಯೋಗೇಶ್ವರ ಶ್ರೀಗಳು, ಕಲ್ಮಠದ ಗುರುಸಿದ್ಧ ಶ್ರೀಗಳು, ಹಂಪಸಾಗರದ ನವಲಿ ಹಿರೇಮಠದ ಶಿವಲಿಂಗ ರುದ್ರಮುನಿ ಶ್ರೀಗಳು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜೆ ಸಲ್ಲಿಸಿ ರಥಕ್ಕೆ ಚಾಲನೆ ನೀಡುವರು.
ಶ್ರೀ ಮಠದಿಂದ ಚೌಕಿಮಠದವರೆಗೂ ರಥವು ಸಾಗುವುದು. ಇದಕ್ಕೂ ಪೂರ್ವ ಬೆಳಿಗ್ಗೆ ಬಸವರಾಜೇಂದ್ರ ಮಹಾಸ್ವಾಮಿಗಳ ಗದ್ದುಗೆಗೆ ಅಭಿಷೇಕ, ವಿಶೇಷ ಪೂಜಾ ಕೈಂಕರ್ಯಗಳು ಜರುಗುವವು. 11.45ಕ್ಕೆ ಸಾಮೂಹಿಕ ವಿವಾಹಗಳು ಜರುಗುವವು. ರಾತ್ರಿ ಅಲ್ಲಮಪ್ರಭುದೇವರ ಸೇವಾ ಸಮಿತಿ ಆಶ್ರಯದಲ್ಲಿ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಎ.26ರಂದು ಸಂಜೆ ಲಘು ರಥೋತ್ಸವ ನೆರವೇರುವುದು ಎಂದು ಪ್ರಕಟಣೆ ತಿಳಿಸಿದೆ.