ಇಂದು `ಸಾರ್ಥಕ ರವಿ ಸಂವತ್ಸರ’ ಅಭಿನಂದನಾ ಸಮಾರಂಭ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಇದೇ ಎಪ್ರಿಲ್ 30ರಂದು ಡಾ. ರವಿ ಗುಂಜೀಕರ್ ಸರಕಾರಿ ಸೇವೆಯಿಂದ ನಿವೃತ್ತರಾಗಿದ್ದರೂ, ಅವರ ಸಾಮಾಜಿಕ ಕಾಳಜಿ, ಸಮಾಜ ಸೇವೆಗೆ ಅಂದೇ ಹೊಸ ಮುನ್ನುಡಿ ಬರೆದರು. ಡಾ. ರವಿ ಗುಂಜೀಕರ್ ಅಭಿಮಾನಿ ಬಳಗ ಹಾಗೂ ಸರಕಾರಿ ನೌಕರರ ಸಂಘದ ಸರ್ವ ಸದಸ್ಯರು, ವಿವಿಧ ಸಂಘಗಳ ಆಶ್ರಯದಲ್ಲಿ ಡಾ. ರವಿ ಗುಂಜೀಕರ್ ಅವರ ಸೇವಾ ನಿವೃತ್ತಿ ನಿಮಿತ್ತ ಅಭಿನಂದನಾ ಸಮಾರಂಭವನ್ನು ಸ್ಮರಣೀಯ ಹಾಗೂ ಸಮಾಜಮುಖಿಯಾಗಿಸಬೇಕು ಎಂದು ಹಲವಾರು ವಿಧಾಯಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಾದರಿಯಾದರು.

Advertisement

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನಿವೃತ್ತ ಜಿಲ್ಲಾ ಅಧಿಕಾರಿ ಹಾಗೂ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಹಿರಿಯ ಉಪಾಧ್ಯಕ್ಷ, ಜಿಲ್ಲಾ ಘಟಕದ ಅಧ್ಯಕ್ಷ ಡಾ. ರವಿ ಗುಂಜೀಕರ್ ಅವರ ಸೇವಾ ನಿವೃತ್ತಿಯ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಸಮಾಜಮುಖಿ ಕಾರ್ಯಗಳು, ಗುಂಜೀಕರ್ ಅವರ ಮುಂದಿನ ಸಾಮಾಜಿಕ ಸೇವೆಗೆ ಮುನ್ನುಡಿಯಾಗಿದೆ.

ಮೇ 1ರಂದು 60 ಜನ ಪೌರ ಕಾರ್ಮಿಕರಿಗೆ ಸನ್ಮಾನ ಆಯೋಜಿಸುವ ಮೂಲಕ ಡಾ. ರವಿ ಗುಂಜೀಕರ್ ಅಭಿಮಾನಿ ಬಳಗ ವಿಶಿಷ್ಟ ಕಾರ್ಯಕ್ರಮಕ್ಕೆ ನಾಂದಿ ಹಾಡಿತು. ಮುಂದಿನ 6 ದಿನಗಳ ಅವಧಿಯಲ್ಲಿ ನೌಕರರ ಭವನದಲ್ಲಿ 60ಕ್ಕೂ ಹೆಚ್ಚು ಜನರಿಂದ ಸ್ವಯಂಪ್ರೇರಿತ ರಕ್ತದಾನ ಶಿಬಿರ, ಮಣಕವಾಡದ ಶ್ರೀಗಳ ನೇತೃತ್ವದಲ್ಲ 60 ಸಸಿ ನೆಡುವ ಮೂಲಕ ವನಮಹೋತ್ಸವ ಆಚರಣೆ, ಸರಕಾರಿ ಆಸ್ಪತ್ರೆ ಹಾಗೂ ಬುದ್ಧಿಮಾಂಧ್ಯ ಮಕ್ಕಳಿಗೆ ಹಾಲು-ಹಣ್ಣು ವಿತರಣೆ, ಮಹಿಳಾ ನೌಕರರ ದಿನಾಚರಣೆ ಅಂಗವಾಗಿ ಜಿಲ್ಲೆಯ 60 ಜನ ಸಾಧಕ ಮಹಿಳೆಯರನ್ನು ಗೌರವಿಸುವ ಕಾರ್ಯಗಳಾದವು. ವಿಶೇಷವಾಗಿ ಡಾ. ರವಿ ಗುಂಜೀಕರ್ ತಾವು ಕಲಿತ ಸರಕಾರಿ ಹಿರಿಯ ಕನ್ನಡ ಗಂಡು ಮಕ್ಕಳ ಶಾಲೆ ನಂ. 2ನ್ನು ದತ್ತು ತೆಗೆದುಕೊಳ್ಳುವ ಮೂಲಕ ತಮ್ಮ ಸೇವಾ ನಿವೃತ್ತಿಗೆ ಸಾರ್ಥಕತೆ ತಂದುಕೊಟ್ಟರು.

ಮೂರು ದಶಕಗಳ ಕಾಲ ಸರಕಾರಿ ಸೇವೆ ಸಲ್ಲಿಸಿ, ಸತತ ಮೂರು ಬಾರಿ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಿದ್ದ ರವಿ ಗುಂಜೀಕರ್ ಅವರಿಗೆ ಅವರ ಅಭಿಮಾನಿ ಬಳಗ, ಸರಕಾರಿ ನೌಕರರ ಸಂಘ, ವೃಂದ ಸಂಘಗಳು ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಮೇ 6ರಂದು ಮುಂಜಾನೆ 10.30ಕ್ಕೆ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ `ಸಾರ್ಥಕ ರವಿ ಸಂವತ್ಸರ’ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಸಮಾರಂಭದಲ್ಲಿ ವಿವಿಧ ಕ್ಷೇತ್ರದ 60 ಜನ ಸಾಧಕರನ್ನು ಸನ್ಮಾನಿಸಲಾಗುತ್ತಿದೆ. ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದು, ಸಭಾಪತಿ ಬಸವರಾಜ ಹೊರಟ್ಟಿ ಘನ ಉಪಸ್ಥಿತಿ ವಹಿಸುವರು. ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹಾಗೂ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ಪ್ರತಿಷ್ಠಿತ ಗಂಧರ್ವ ಇವೆಂಟ್ಸ್ ಬೆಂಗಳೂರು ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ. ರವಿ ಗುಂಜೀಕರ್ ಅವರ ಸೇವಾ ನಿವೃತ್ತಿಯಿಂದ ತೆರವಾದ ಸ್ಥಾನಕ್ಕೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ಡಾ. ಬಸವರಾಜ ಬಳ್ಳಾರಿ ಆಯ್ಕೆಯಾಗಿದ್ದಾರೆ. ಗುಂಜೀಕರ್ ನಿವೃತ್ತಿಗೂ ಮುನ್ನ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಡಾ. ಬಸವರಾಜ ಬಳ್ಳಾರಿ ಬಹುಮತದೊಂದಿಗೆ ಆಯ್ಕೆಯಾಗಿದ್ದಾರೆ. ರವಿ ಗುಂಜೀಕರ್ ಅವರ ಸಮಾಜಮುಖಿ ಕಾರ್ಯ, ಅಭಿನಂದನಾ ಸಮಾರಂಭಕ್ಕೆ ಡಾ. ಬಸವರಾಜ ಬಳ್ಳಾರಿ ಬೆನ್ನೆಲುಬಾಗಿದ್ದಾರೆ.

ತಮ್ಮ ಸಂಘಟನಾ ಶಕ್ತಿಯ ಮೂಲಕ ಡಾ. ರವಿ ಗುಂಜೀಕರ್ ಮೂರು ದಶಕಗಳ ಕಾಲ ಸರಕಾರಿ ಸೇವೆ ಸಲ್ಲಿಸಿ, ಸರಕಾರಿ ನೌಕರರ ಸಂಘವನ್ನು ಸಶಕ್ತವಾಗಿ ಸಂಘಟಿಸಿದ್ದಾರೆ. ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಮತ್ತು ರವಿ ಗುಂಜೀಕರ್ ಮಾರ್ಗದರ್ಶನದಲ್ಲಿ ಸಂಘವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಪ್ರಯತ್ನ ಮಾಡುತ್ತೇನೆ.

– ಡಾ. ಬಸವರಾಜ ಬಳ್ಳಾರಿ.

ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರು.


Spread the love

LEAVE A REPLY

Please enter your comment!
Please enter your name here